ಕಾರವಾರ: ವನ್ಯಜೀವಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ದ ಜಿಂಕೆ ಮಾಂಸದ ಸಾಂಬಾರು ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೋಯ್ಡಾ ತಾಲೂಕಿನ ಜಗಲ್ಬೇಟ್ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಜಗಲ್ಬೇಟ್ನ ಕುಮ್ರಾಲ್ ಗ್ರಾಮದ ಮನೋಹರ್ ರಾಮಾ ಕದಂ, ದತ್ತಾ ರಾಮಾ ಕದಂ, ಈಶ್ವರ್ ಚಂದ್ರು ಹಣಬರ್ ಬಂಧಿತ ಆರೋಪಿಗಳು. ಕುಮ್ರಾಲ್ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಜಿಂಕೆಯನ್ನು ನಾಡಾಬಂದೂಕಿನಿಂದ ಬೇಟೆಯಾಡಿದ ಆರೋಪಿಗಳು ತದನಂತರ ಅದನ್ನು ಮನೆಗೆ ತಂದು ಸಾಂಬಾರು ಮಾಡಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯ ಮಾಂಸದಿಂದ ತಯಾರಿಸಿದ ಸಾಂಬಾರು, ಜಿಂಕೆಯ ಚರ್ಮ ಹಾಗೂ ಬೇಟೆಯಾಡಲು ಬಳಸಿದ ನಾಡಾಬಂದೂಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.