ಕಾರವಾರ(ಉತ್ತರ ಕನ್ನಡ): ಹೊಸ ವರ್ಷಾಚರಣೆ ವೇಳೆ ಭಟ್ಕಳದಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ ಬರೆದಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಚೆನ್ನೈನಲ್ಲಿ ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಮೂಲದ ಹನುಮಂತಪ್ಪ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಓರ್ವ ಕಳ್ಳತನದ ಆರೋಪಿಯಾಗಿದ್ದಾನೆ. ಇದೊಂದು ಹುಸಿ ಬೆದರಿಕೆ ಪತ್ರ ಎಂಬುದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.
ಅಂಚೆ ಮೂಲಕ ಬಂದಿದ್ದ ಪತ್ರ : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ, ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 & ಹ್ಯಾಪಿ ನ್ಯೂ ಇಯರ್ 2023" ಎಂದು ಉರ್ದು ಹಾಗೂ ಇಂಗ್ಲಿಷ್ ನಲ್ಲಿ ಬರೆದಿದ್ದ ಪತ್ರವೊಂದು ಅಂಚೆ ಮೂಲಕ ಭಟ್ಕಳ ಠಾಣೆಗೆ ಬಂದು ತಲುಪಿತ್ತು. ಸೂಕ್ಷ್ಮ ವಿಚಾರವಾಗಿದ್ದರಿಂದ ವಿಷಯವನ್ನು ಬಹಿರಂಗಪಡಿಸದೆ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಕಳ್ಳನೋರ್ವ ಬೆಂಗಳೂರಿನಲ್ಲಿ ಲ್ಯಾಪ್‌ಟಾಪ್ ಕದ್ದು, ಚೆನ್ನೈನಲ್ಲಿ ಮಾರಾಟ ಮಾಡಲು ಹೋಗಿದ್ದ. ಮಾರಾಟ ಮಾಡುವಾಗ ಅಂಗಡಿ ಮಾಲೀಕನಿಗೆ ಅನುಮಾನ ಬಂದು ಈತನಲ್ಲಿ ಪ್ರಶ್ನಿಸಿದಾಗ ಆರೋಪಿಯು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಆರೋಪಿಯು ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿದ್ದಾನೆ.
ಘಟನೆ ವಿವರ : ಇನ್ನು ಬಂಧಿತ ಆರೋಪಿ ಹನುಮಂತ ಬೆಂಗಳೂರಿನ ವೈಟ್ ಫಿಲ್ಡ್‌ನಲ್ಲಿ ಆ್ಯಪಲ್ ಕಂಪೆನಿಯ ಲ್ಯಾಪ್ಟಾಪ್ನ್ನು ಕಳ್ಳತನ ಮಾಡಿದ್ದ. ಬಳಿಕ ಅದನ್ನು ಮಾರಲು ಚೆನ್ನೈಗೆ ತೆರಳಿದ್ದ. ಬಳಿಕ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಯತ್ನಿಸಿದ್ದು,ಅಂಗಡಿ ಮಾಲೀಕ ಲ್ಯಾಪ್‌ಟಾಪ್‌ನ ಮ್ಯಾಕ್ ಐಡಿ, ಪಾಸ್‌ವರ್ಡ್ ಕೇಳಿದಾಗ ಕಳ್ಳತನ ಬಯಲಾಗಿದೆ. ಬಳಿಕ ಅಲ್ಲಿಂದ ಆರೋಪಿ ತಪ್ಪಿಸಿಕೊಂಡು ವಾಪಾಸ್ ಬೆಂಗಳೂರಿಗೆ ಬಂದಿದ್ದ.
ಬಳಿಕ ಅಂಗಡಿ ಮಾಲೀಕನ ಮೊಬೈಲ್ ನಂಬರ್ ಇದ್ದಿದ್ದರಿಂದ ಫೇಕ್ ಐಡಿ ಮೇಲೆ ಸಿಮ್‌ವೊಂದನ್ನು ಖರೀದಿಸಿದ್ದಾನೆ. ಬಳಿಕ ಇದರಿಂದ ಅಂಗಡಿ ಮಾಲೀಕನಿಗೆ ಕರೆ ಮಾಡಿ ಕಳ್ಳತನ ಮಾಡಿರುವ ಬಗ್ಗೆ ಯಾರಿಗಾದರೂ ಹೇಳಿದರೆ ಪೊಲೀಸರಿಂದ ನಿನ್ನನ್ನೇ ಬಂಧಿಸುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ. ಇದಾದ ನಂತರ ಚೆನ್ನೈ ಹಾಗೂ ಭಟ್ಕಳ ಪೊಲೀಸರಿಗೆ ಪತ್ರ ಬರೆದಿದ್ದನು. ಸದ್ಯ ಭಟ್ಕಳ ಪೊಲೀಸರು ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ಚೆನೈನಿಂದ ಬಂಧಿಸಿ ಭಟ್ಕಳಕ್ಕೆ ಕರೆತಂದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಬಂಧಿತ ಆರೋಪಿಗೆ ಭಟ್ಕಳದ ಸಂಪರ್ಕ ಇಲ್ಲದಿದ್ದರೂ ಯಾಕೆ ಭಟ್ಕಳದ ಹೆಸರನ್ನು ಪೋಸ್ಟ್ ಕಾರ್ಡ್ ನಲ್ಲಿ ಬರೆದಿದ್ದಾನೆ ಎಂಬ ಬಗ್ಗೆಯೂ ತನಿಖೆ ನಡೆಸುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ತಿಳಿಸಿದ್ದಾರೆ.
ಇನ್ನು ಶಾಂತವಾಗಿರುವ ಭಟ್ಕಳದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿ ಭಟ್ಕಳದ ಹೆಸರಿಗೆ ಕಳಂಕ ತರುವಂತಹ ಕೆಲಸವಾಗುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಭಟ್ಕಳದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರ ಸಹಕಾರ ನೀಡಿ, ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ದೀಪಕ್ ನಾಯ್ಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಶಾಲೆಗಳಿಗೆ ಬಂದಿದ್ದು ಹುಸಿ ಬಾಂಬ್ ಬೆದರಿಕೆ: ಪೋಷಕರ ನಿಟ್ಟುಸಿರು