ಕಾರವಾರ: ಬಿಜೆಪಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿಗೂ ಸ್ಥಾನಮಾನ ಸಿಗಲಿದೆ ಎಂಬುದಕ್ಕೆ ರಾಜ್ಯಸಭೆಗೆ ಟಿಕೆಟ್ ಪಡೆದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಸಾಕ್ಷಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಇದು ರಾಜ್ಯದ ತಳಮಟ್ಟದ ಕಾರ್ಯಕರ್ತರಿಗೆ ಖುಷಿ ನೀಡಿದೆ. ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದ ತಮಗೂ ಅವಕಾಶ ಸಿಗಬಹುದೆಂಬ ನಿರೀಕ್ಷೆ ಸಾವಿರಾರು ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದೆ ಎಂದು ಹೇಳಿದರು.
ನ್ಯಾಷನಲ್ ಪಾರ್ಟಿಯಲ್ಲಿ ಕೆಲವೊಂದು ತೀರ್ಮಾನಗಳು ದೆಹಲಿಯಲ್ಲಿ ನಡೆಯುತ್ತವೆ. ಅದರಂತೆ ಇಂದು ಅಂಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದರೆ ಅದು ಖುಷಿ ಪಡಬೇಕಾದ ವಿಚಾರ. ಆಯ್ಕೆಯಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಬೇಕಾಗುತ್ತದೆ ಎಂದು ಹೇಳಿದರು.
ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಲಹೆ ಪಡೆಯುತ್ತದೆ. ಆದರೆ ಈ ಆಯ್ಕೆಯಲ್ಲಿ ಹಿಂದುಳಿದ ಸಮಾಜವನ್ನು ಗೌರವಿಸುವ ಕೆಲಸವಾಗಿದೆ. ಸ್ಥಾನಕ್ಕಾಗಿ ಆಸೆ ಪಡುವುದು ಸಹಜ. ಆದರೆ ಎಲ್ಲರನ್ನೂ ಸಂತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.