ಕಾರವಾರ : ಕೊರೊನಾ 2ನೇ ಅಲೆ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿದ್ದಾರೆ. ವೈರಸ್ ಹೊಡೆತದಿಂದ ಇದೀಗ ಚೇತರಿಸಿಕೊಳ್ಳುತ್ತಿರುವ ಜನರಿಗೆ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನುವುದು ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಚಿಂತಿಸಿರುವ ಉತ್ತರಕನ್ನಡ ಜಿಲ್ಲಾಡಳಿತ ಮಕ್ಕಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಅಗತ್ಯ ಮುಂಜಾಗ್ರತಾ ಕ್ರಮ : ಕಳೆದ ವರ್ಷಕ್ಕಿಂತ ಈ ಬಾರಿ ಕೊರೊನಾ ಅಬ್ಬರ ಜೋರಾಗಿದೆ. 2ನೆಯ ಅಲೆಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಜನರೂ ಸಹ ಹೈರಾಣಾಗಿದ್ದಾರೆ. ಸದ್ಯ 3ನೇ ಅಲೆ ಮಕ್ಕಳನ್ನು ಟಾರ್ಗೆಟ್ ಮಾಡುವ ಮುನ್ಸೂಚನೆ ಇರುವ ಹಿನ್ನೆಲೆ ಮಕ್ಕಳ ಸುರಕ್ಷತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಉತ್ತರಕನ್ನಡ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೊರೊನಾ ಹೆಚ್ಚು ಬಾಧಿಸುವ ಸಾಧ್ಯತೆ ಇರುವುದಿಂದ ಜಿಲ್ಲಾಡಳಿತ ಈ ಕುರಿತು ಸರ್ವೇ ನಡೆಸಿದೆ.
ಚ್ಯವನಪ್ರಾಶವನ್ನ ಒಳಗೊಂಡ ಕಿಟ್ : ಜಿಲ್ಲೆಯಲ್ಲಿ ಒಟ್ಟು 1,06,263 ಮಂದಿ ಮಕ್ಕಳಿದ್ದಾರೆ. ಈ ಪೈಕಿ 184 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 4142 ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳ ಆರೈಕೆಗೆ ಮೆಡಿಕಲ್ ಕಿಟ್‌ನ ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಲಾಗಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಮೊದಲ ಹಂತವಾಗಿ ಮಲ್ಟಿವಿಟಮಿನ್, ಪ್ಯಾರಾಸಿಟಮಲ್, ಜಿಂಕ್-ಐಯಾನ್ ಸಿರಪ್ ಹಾಗೂ ಪ್ರೋಟೀನ್ ಪೌಡರ್ ಸೇರಿದಂತೆ ಉಸಿರಾಟಕ್ಕೆ ಅನುಕೂಲವಾಗುವ ಚ್ಯವನಪ್ರಾಶವನ್ನ ಒಳಗೊಂಡ ಕಿಟ್‌ನ ವಿತರಿಸಲು ಸಿದ್ದಪಡಿಸಲಾಗಿದೆ.
ಮನೆ ಬಾಗಿಲಿಗೆ ತಲುಪಿಸುವ ಯೋಜನೆ : ತೀವ್ರ ಅಪೌಷ್ಠಿಕತೆ ಮಾತ್ರವಲ್ಲದೇ ಸಾಧಾರಣ ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೂ ಪ್ರತಿ ತಿಂಗಳು ಆದ್ಯತೆಯ ಮೇರೆಗೆ ಪೌಷ್ಟಿಕಾಂಶಗಳ ಕಿಟ್ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮೊಟ್ಟೆ, ಬೇಳೆ ಕಾಳುಗಳು ಸೇರಿದಂತೆ ಅಗತ್ಯ ಪೌಷ್ಠಿಕ ಆಹಾರಗಳನ್ನ ಅವರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮೂಲಕ ಈ ಕಿಟ್‌ನ ಮಕ್ಕಳಿಗೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರಿಂದಲೂ ಮೆಚ್ಚುಗೆ : ಅಲ್ಲದೇ ಕಾಲ ಕಾಲಕ್ಕೆ ಪರಿಶೀಲನೆ ನಡೆಸುವ ಮೂಲಕ ಅಪೌಷ್ಠಿಕ ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನ ಒದಗಿಸುವ ಮೂಲಕ ಅವರನ್ನು 3ನೇ ಅಲೆಯಲ್ಲಿ ಕೊರೊನಾಕ್ಕೆ ತುತ್ತಾಗದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಆದಷ್ಟು ಬೇಗ ಅಗತ್ಯವಿರುವ ಮಕ್ಕಳಿಗೆ ಪೌಷ್ಠಿಕಾಂಶಗಳ ಕಿಟ್ ತಲುಪಿಸುವಂತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ: ಅಮಾನವೀಯ ಘಟನೆ : ಮಂಡ್ಯದಲ್ಲಿ ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ