ಭಟ್ಕಳ: ಕೊರೊನಾ ಪ್ರಕರಣ ಭಟ್ಕಳದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿಯಿಂದ ಜಾತ್ರಾ ಮಹೋತ್ಸವದ ಬದಲು ಸರಳ ವಿಧಿ ವಿಧಾನದಂತೆ ಪೂಜೆ ನಡೆಸಲಾಗುವುದು ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು.
ಭಟ್ಕಳದ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾರಿ ಜಾತ್ರಾ ಮಹೋತ್ಸವವೂ ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಲಿತ್ತು. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಜುಲೈ 15 ಮತ್ತು 16 ರಂದು ನಡೆಯಬೇಕಿದ್ದ ಮಾರಿಜಾತ್ರೆಗೆ ಸರಕಾರದ ಆದೇಶದಂತೆ ಧಾರ್ಮಿಕ ಜಾತ್ರೆ ಕಾರ್ಯಕ್ರಮ ನಡೆಸಲು ನಿರ್ಬಂಧ ಇರುವುದರಿಂದ ಜಾತ್ರೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಭಕ್ತಾದಿಗಳು ತಮ್ಮ ತಮ್ಮ ಮನೆಯಲ್ಲಿಯೇ ದೇವಿಯ ಆರಾಧನೆ ಮಾಡಿ ಹಬ್ಬ ಆಚರಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ. ಪ್ರತಿ ವರ್ಷದಂತೆ ಮಾರಿಹಬ್ಬದ ವಿಧಿವಿಧಾನಗಳು ಸಂಪ್ರದಾಯದಂತೆ ನಡೆಸಲಿದ್ದು, ಜಾತ್ರೆ ಬದಲು ಕೇವಲ ಆಡಳಿತ ಕಮಿಟಿಯಿಂದ ಎರಡು ದಿನದ ಪೂಜಾ ಕೈಂಕರ್ಯ ನಡೆಯಲಿದೆ ಎಂದರು.
ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ. ನಾಯ್ಕ ಮಾತನಾಡಿ 'ಕೋವಿಡ್ ಹಿನ್ನೆಲೆ ಭಕ್ತಾಧಿಗಳಿಗೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಈ ಸಮಯದಲ್ಲಿ ದೇವಸ್ಥಾನದ ಒಳಗಡೆ ಭಕ್ತಾಧಿಗಳಿಗೆ ಹಣ್ಣುಕಾಯಿ ಸೇವೆ, ಉಡಿ ಸೇವೆ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ನಿಷೇಧಿಸಲಾಗಿದೆ. ಹಣ್ಣುಕಾಯಿ ಅಂಗಡಿ ಹಾಗೂ ಇತರ ಜಾತ್ರಾ ಅಂಗಡಿಗಳಿಗೆ ಅವಕಾಶ ಇರುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಭಕ್ತಾಧಿಗಳು ಮನೆಯಲ್ಲಿಯೇ ಮಾರಿಹಬ್ಬ ಆಚರಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಮಿಟಿ ಉಪಾಧ್ಯಕ್ಷ ರಘುವೀರ ಬಾಳಗಿ, ಸದಸ್ಯರಾದ ನರೇಂದ್ರ ನಾಯಕ, ಶಂಕರ ಶೆಟ್ಟಿ, ಶ್ರೀಪಾದ ಎನ್. ಕಂಚುಗಾರ, ಸುರೇಶ ಆಚಾರ್ಯ, ಸುರೇಶ ಭಟ್ಕಳಕರ್ ಸೇರಿದಂತೆ ಮುಂತಾದವರು ಇದ್ದರು.