ಕಾರವಾರ: ಗೆಜ್ಜೆ ಕಟ್ಟಿ ರಂಗ ಸಜ್ಜಿಕೆಯಲ್ಲಿ ಕುಣಿಯುತ್ತಿರುವಾಗಲೇ ಹೆಸರಾಂತ ಕಲಾವಿದ ಚಂದ್ರಹಾಸ ಹುಡುಗೋಡು ವೇದಿಕೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹುಡುಗೋಡಿನವರು. 56 ವರ್ಷದ ಅವರು ಬೈಂದೂರುನಲ್ಲಿ ರವಿವಾರ ನಡೆದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಮೇಳದ ಅತಿಥಿ ಕಲಾವಿದನಾಗಿ ಬಣ್ಣ ಹಚ್ಚಿ ಕುಣಿಯುತ್ತಿರುವಾಗಲೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ 30 ವರ್ಷಗಳಿಂದ ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿ ಯಕ್ಷಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಯಕ್ಷ ದಿಗ್ಗಜರೆನಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಹಾಬಲ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಸೇರಿದಂತೆ ಇನ್ನಿತರ ಕಲಾವಿರೊಂದಿಗೆ ನಾಯಕ ಪ್ರತಿಯಾಕನಾಗಿ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದ ಅವರು ಇದೀಗ ಗಾನಲೋಕದಲ್ಲಿಯೇ ಲೀನವಾಗಿ ಕಲಾ ಮಾತೆಯ ಮಡಿಲು ಸೇರಿದ್ದಾರೆ.
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದ ಯಕ್ಷಲೋಕಕ್ಕೆ ಇತ್ತಿಚೆಗೆ ಜಲವಳ್ಳಿ ವೆಂಕಟೇಶ್ ರಾವ್ ನಿಧನರಾಗಿರುವುದು ಕಲಾಭಿಮಾನಿಗಳಿಗೆ ಆಘಾತ ನೀಡಿತ್ತು. ಆದರೆ ಇದೀಗ ಚಂದ್ರಹಾಸ ಹುಡುಗೋಡು ಗೆಜ್ಜೆ ಕಟ್ಟಿ ಕುಣಿಯುವಾಗಲೇ ಪ್ರಾಣವನ್ನು ಬಿಟ್ಟಿರುವುದು ಈಡಿ ಕಲಾ ಲೋಕವೇ ಕಂಬನಿ ಮಿಡಿಯುತ್ತಿದೆ.