ಕಾರವಾರ: ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸರ್ಕಾರದಿಂದ ಬಹುಮಾನ ಇದ್ದು, ಸೋತವರಿಗೆ ಏನು ಮಾಡಬೇಕೆಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಕಾರವಾರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಹದಿನೈದಕ್ಕೆ ಹದಿನೈದು ಸ್ಥಾನಗಳನ್ನೂ ಸಹ ಗೆಲ್ಲುತ್ತೇವೆ ಎನ್ನುವ ನಿರೀಕ್ಷೆ ಇತ್ತು. ಅದರಲ್ಲಿ ಹನ್ನೆರಡು ಸ್ಥಾನದಲ್ಲಿ ಗೆಲುವನ್ನು ಸಾಧಿಸುವ ವಿಶ್ವಾಸವಿತ್ತು. ಅದರಂತೆ ಗೆಲುವು ಪಡೆದಿದ್ದೇವೆ. ಮತದಾರರು ಒಂದು ಸ್ಥಿರ ಸರ್ಕಾರವನ್ನು ತರುವ ಮೂಲಕ ಯಡಿಯೂರಪ್ಪ ಅವರಿಗೆ ಹೊಸ ಚೈತನ್ಯ ಹಾಗೂ ವಿಶ್ವಾಸ ತುಂಬಿದ್ದಾರೆ ಎಂದು ಹೇಳಿದರು.
ಚುನಾವಣೆ ನಂತರ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ ಎಂದು ಸಿದ್ದರಾಮಯ್ಯ, ಗುಂಡೂರಾವ್ ಹೇಳಿದ್ದರು. ಆದರೀಗ ಸೋಲು ಅವರನ್ನೇ ಸುತ್ತಿಕೊಂಡಿದ್ದು, ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿರುವುದು ಒಳ್ಳೆಯ ಕ್ರಮ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಇನ್ನು ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲಿಯೇ ನಡೆಯಲಿದೆ. ಎಲ್ಲವನ್ನೂ ಪಕ್ಷ ನಿರ್ಧರಿಸುತ್ತದೆ. ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟದ ಬಗ್ಗೆ ತಿಳಿದಿಲ್ಲ. ಎಲ್ಲರಿಗೂ ಆಸೆ ಆಕಾಂಕ್ಷೆಗಳಿರುತ್ತವೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.