ಕಾರವಾರ : ಲಾಕ್‌ಡೌನ್‌ನಿಂದಾಗಿ ಕಾರವಾರದಲ್ಲಿ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಕುಟುಂಬಗಳು ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿ ಸಿಲುಕಿವೆ.
ನಗರದ ನಂದನಗದ್ದಾದ ಅಂಬೇಡ್ಕರ್ ಕಾಲೋನಿಯ ಸುಮಾರು 60 ರಿಂದ 70 ಕುಟುಂಬಗಳು ಬಿದಿರಿನಿಂದ ಬುಟ್ಟಿ, ಅಕ್ಕಿ ಕೇರುವ ಮೊರ, ಬೀಸಣಿಕೆಯಂತಹ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸ ಮಾಡಿಕೊಂಡು ಬರುತ್ತಿವೆ. ಪ್ರತಿ ಭಾನುವಾರ ನಡೆಯುವ ಸಂತೆ, ಮಾರುಕಟ್ಟೆ, ಜಾತ್ರೆಗಳು ಸೇರಿ ವಿವಿಧೆಡೆ ಬಿದಿರಿನ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್ಡೌನ್ನಿಂದ ಎಲ್ಲವೂ ಸ್ಥಗಿತಗೊಂಡಿದ್ದು, ಬಿದಿರಿನ ವಸ್ತುಗಳನ್ನೇ ನಂಬಿಕೊಂಡಿದ್ದ ಇವರು ಬೀದಿಗೆ ಬರುವಂತಾಗಿದೆ.
ಕರಕುಶಲ ವಸ್ತುಗಳನ್ನ ತಯಾರಿಸಲು ಅಗತ್ಯವಿರುವ ಬಿದಿರನ್ನು ತಾಲೂಕಿನ ಕದ್ರಾ, ಹಣಕೋಣ ಭಾಗಗಳಿಂದ ಖರೀದಿಸಿ ತರಲಾಗುತ್ತದೆ. ಅಕ್ಕಿ ಕೇರುವ ಮರವೊಂದಕ್ಕೆ 200 ರೂ. ದರವಿದೆ. ಮದುವೆ ಸಂದರ್ಭಗಳಲ್ಲಿ ನೀಡಲಾಗುವ ಬುಟ್ಟಿ, ಬೀಸಣಿಗೆ ಸೇರಿ 300 ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಇದೀಗ ಯಾವುದೇ ಕಾರ್ಯಕ್ರಮಗಳಾಗಲಿ ಮಾರುಕಟ್ಟೆಗಳಾಗಲಿ, ಇಲ್ಲದಿರುವುದರಿಂದ ಬಿದಿರಿನ ವಸ್ತುಗಳನ್ನು ತಯಾರಿಸಿದ ಮಹಿಳೆಯರು ಅವುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ ಸರ್ಕಾರ ಅಸಂಘಟಿತ ಕಾರ್ಮಿಕರು, ರೈತರಿಗೆ ನೆರವು ನೀಡಿದಂತೆ ಕುಶಲಕರ್ಮಿಗಳಿಗೂ ನೆರವು ನೀಡಿ ಬಡ್ಡಿಮನ್ನಾ, ಸಾಲಮನ್ನಾದಂತಹ ಯೋಜನೆಗಳನ್ನ ಬಡ ಶ್ರಮಿಕವರ್ಗದವರಿಗೆ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.