ಕಾರವಾರ: ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆತರುವ ಕೆಲಸವನ್ನು ಭಾರತ ಸರ್ಕಾರ ಮಾಡಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಆಗಿರುವ ಆತಂಕದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನೇಕರನ್ನು ಸರ್ಕಾರ ಭಾರತಕ್ಕೆ ಕರೆತರುವ ಪ್ರಯತ್ನ ಮಾಡಿದೆ. ಈ ಮಧ್ಯೆ ಇನ್ನೂ ಕೆಲವರು ಅಲ್ಲಿಯೇ ಸಿಲುಕಿದ್ದಾರೆಂಬ ಮಾಹಿತಿ ದೊರೆತಿದೆ. ಈ ಪೈಕಿ ಉತ್ತರಕನ್ನಡ ಜಿಲ್ಲೆಯವರೂ ಇರುವುದು ತಿಳಿದು ಬಂದಿದೆ. ರಾಜ್ಯದ ಪ್ರತಿ ಜಿಲ್ಲೆಯ ಜನರ ವಿವರ ಕಲೆ ಹಾಕಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೊನೆಯ ವ್ಯಕ್ತಿಯನ್ನೂ ಸುರಕ್ಷಿತವಾಗಿ ಕರೆತರುವ ಕೆಲಸವನ್ನ ಭಾರತ ಸರ್ಕಾರ ಮಾಡಲಿದೆ ಎಂದು ಅವರು ಭರವಸೆ ನೀಡಿದರು.
ಸಂಘಟನೆಗಳು ಬ್ಯಾನ್?: ಸಂಘಟನೆಗಳನ್ನು ಬ್ಯಾನ್ ಮಾಡಲು ಅದರದ್ದೇ ಆದ ಮಾನದಂಡಗಳಿವೆ. ಆರೋಪ ಕೇಳಿ ಬಂದಿರುವ ಸಂಘಟನೆಗಳನ್ನು ಏನು ಮಾಡಬೇಕೆಂದು ಸರ್ಕಾರ ಯೋಚನೆ ಮಾಡುತ್ತಿದೆ. ಮತಾಂಧತೆ, ಕ್ರೂರತ್ವ ಮೆರೆದವರಿಗೆ ಕಠಿಣ ಶಿಕ್ಷೆಯೇ ಪರಿಹಾರ. ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಗುಪ್ತಚರ ಇಲಾಖೆಯಿಂದ ಮತ್ತಷ್ಟು ವಿಸ್ತೃತ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಕೋವಿಡ್ ಸಂಕಷ್ಟ ಹಿನ್ನೆಲೆ ಸರಳ ಹುಟ್ಟುಹಬ್ಬ ಆಚರಣೆ.. ಹಾರ, ತುರಾಯಿ ತರಬೇಡಿ ಎಂದ ಬಿಎಸ್ವೈ