ಕಾರವಾರ: ಶಾಲೆಗೆ ಬಾರದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಕೈ-ಕಾಲುಗಳನ್ನು ಕಟ್ಟಿ ಬಾಸುಂಡೆ ಮೂಡುವಂತೆ ಥಳಿಸಿರುವ ಘಟನೆ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ನಡೆದಿದೆ.
ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೋಸಯ್ಯ ರೆಡ್ಡಿ ಪೋಗು ಎಂಬಾತ ಜಾನು ಟಕ್ಕು ಗೌಳಿಯ ಎಂಬ 4ನೇ ತರಗತಿಯ ವಿದ್ಯಾರ್ಥಿ ಬಟ್ಟೆ ಬಿಚ್ಚಿ ಕೈ ಕಾಲುಗಳನ್ನು ಕಟ್ಟಿ ಬೆತ್ತದಿಂದ ಹೊಡೆದಿದ್ದಾರೆ. ಇದರಿಂದ ಬಾಲಕನ ಬೆನ್ನ ಮೇಲೆ ಬಾಸುಂಡೆಗಳು ಮೂಡಿವೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜಾನು ಗೌಳಿಯ ಪೋಷಕರು ಹಾಗೂ ಸ್ಥಳೀಯರು ಶಾಲೆಗೆ ದೌಡಾಯಿಸಿ, ಶಿಕ್ಷಕನ ಮೃಗಿಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಶಿಕ್ಷಕನಿಗೆ ಗೂಸಾ:
ಅಮಾನವೀಯವಾಗಿ ವರ್ತಿಸಿದ ಎಂದು ಆಕ್ರೋಶಗೊಂಡ ಸ್ಥಳೀಯರು, ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗೂಸಾ ನೀಡಿದ್ದಾರೆ. ಅಲ್ಲದೆ, ಜೊಯಿಡಾ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲು ಮಾಡಿದ್ದಾರೆ. ಇನ್ನು ಶಿಕ್ಷಕನ ಹಲ್ಲೆಯ ಬಗ್ಗೆ ತಿಳಿದ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.