ಕಾರವಾರ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಷ್ಟ್ರಾದ್ಯಂತ ಬ್ಯಾಂಕ್ಗಳ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಖಾಸಗಿ ಬ್ಯಾಂಕ್ಗಳನ್ನ ಹೊರತುಪಡಿಸಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಬಂದ್ ಮಾಡುವ ಮೂಲಕ ಬ್ಯಾಂಕ್ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಕಾರವಾರದಲ್ಲಿ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ ಉತ್ತರಕನ್ನಡ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಸದಸ್ಯರು ಬ್ಯಾಂಕ್ಗಳ ವೀಲಿನಗೊಳಿಸುವುದನ್ನು ವಿರೋಧಿಸಿ, ವೇತನ ಪರಿಷ್ಕರಣೆ, ಸಿಬ್ಬಂದಿ ಕಲ್ಯಾಣ ನಿಧಿಯ ಹಂಚಿಕೆ, ವಿಶೇಷ ವೇತನವನ್ನು ಮೂಲ ವೇತನದೊಡನೆ ವಿಲೀನಗೊಳಿಸುವುದು, ಬ್ಯಾಂಕುಗಳ ವಹಿವಾಟು ವಾರದಲ್ಲಿ ಐದು ದಿನಗಳಿಗೆ ಮಿತಿಗೊಳಿಸುವುದು, ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿಗಳ ಪಿಂಚಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ತಕ್ಷಣವೆ ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್ ನೌಕರರು ಇಂದು ಹಾಗೂ ನಾಳೆ ಪ್ರತಿಭಟನೆ ನಡೆಸಲಿದ್ದಾರೆ. ಭಾನವಾರ ರಜೆ ಇರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮುಷ್ಕರ ನಡೆಯಲಿದ್ದು, ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.