ಶಿರಸಿ (ಉತ್ತರ ಕನ್ನಡ): ಮಂಗನಕಾಯಿಲೆ ಪೀಡಿತ ಪ್ರದೇಶಗಳ ಎಲ್ಲಾ ಜನರಿಗೆ ಲಸಿಕೆ ನೀಡಲು ಕಠಿಣ ಕ್ರಮದ ಅವಶ್ಯಕತೆಯಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದ್ದಾರೆ. ಸಿದ್ದಾಪುರ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಮಂಗನಕಾಯಿಲೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಈ ಪ್ರದೇಶಗಳಲ್ಲೇ ಮಂಗನ ಕಾಯಿಲೆ ಏಕೆ ಬರುತ್ತಿದೆ ಎನ್ನುವುದರ ಬಗ್ಗೆ ಸಂಶೋಧನೆ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದು, ಕೊರೊನಾ ವೈರಸ್ ಕಾರಣ ಆ ವರದಿಯ ಕುರಿತು ಚರ್ಚಿಸಲು ಆಗುತ್ತಿಲ್ಲ. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆ ಮಂಗನ ಕಾಯಿಲೆ ಕಡಿಮೆಯಾಗುತ್ತದೆ. ಆದ್ದರಿಂದ ಮತ್ತೆ ಮುಂದಿನ ವರ್ಷ ಕಾಯಿಲೆ ಬಂದಾಗಲೇ ವಿಜ್ಞಾನಿಗಳು ಬರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಂಗನ ಕಾಯಿಲೆ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಸಂಪೂರ್ಣ ಜನರನ್ನು ತಲುಪುವ ಅವಶ್ಯಕತೆಯಿದೆ. ಕೊರೊನಾಗೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳುತ್ತೇವೋ ಅದೇ ರೀತಿ ಮಂಗನಕಾಯಿಲೆಗೆ ಕೂಡಾ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ. ಜನರು ಕಾಡುಗಳಿಗೆ ಹೋಗುವುದನ್ನು ಮೊದಲು ನಿರ್ಬಂಧಿಸಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅನಂತ ಹೆಗಡೆ ಅಶಿಸರ ಹೇಳಿದರು.