ಕಾರವಾರ: ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದಿರುವ ಕಾರಣ ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಅಂಕೋಲಾ ತಾಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನಡೆದಿದೆ.
ಅಂಕೋಲಾ ತಾಲೂಕು ಕೇಂದ್ರದಿಂದ 3 ಕಿ.ಮೀ. ದೂರದ ಪೂಜಗೇರಿಯಲ್ಲಿರುವ ಈ ಕಾಲೇಜಿನಲ್ಲಿ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಹೊಂದಿದ ಜಿಲ್ಲೆಯ ಏಕೈಕ ಕಾಲೇಜು ಕೂಡ ಇದಾಗಿದೆ. ಈ ಎಲ್ಲ ವಿದ್ಯಾರ್ಥಿಗಳ ಪೈಕಿ ಸುಮಾರು 500ಕ್ಕೂ ಅಧಿಕ ಮಂದಿ ನಿತ್ಯ ಬಸ್ಗಳ ಮೂಲಕ ಕಾಲೇಜಿಗೆ ಬರುತ್ತಿದ್ದಾರೆ. ತಾಲೂಕು ಕೇಂದ್ರದಿಂದ ಕಣಗಿಲ್, ಬೆಳಂಬಾರ, ಹೊನ್ನೆಬೈಲ್, ಮಂಜಗುಣಿಗೆ ಹೊರಡುವ ಬಸ್ ಗಳಲ್ಲಿ ಪ್ರಯಾಣಿಸಬೇಕು. ಆದರೆ ಈ ಬಸ್ಗಳ ಸಂಖ್ಯೆ ಕಡಿಮೆ ಇದೆ.
ಇರುವ ಕೆಲವೇ ಕೆಲವು ಬಸ್ಗಳಲ್ಲಿ ಸೀಟು ಪಡೆಯುವುದಿರಲಿ ಒಳಗೆ ನಿಲ್ಲಲು ಸಹ ಜಾಗ ಇರುವುದಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಬಸ್ ತಂಗುದಾಣದಲ್ಲಿ ಬಸ್ಗಾಗಿ ವಿದ್ಯಾರ್ಥಿಗಳು ಕಾಯುತ್ತಾ ನಿಂತಿದ್ದರು. ಈ ವೇಳೆ ಬಾಸಗೋಡ ಮೂಲಕ ಬಂದ ಬಸ್ ಅನ್ನು ಚಾಲಕ ಬಸ್ ನಿಲುಗಡೆ ಜಾಗದಲ್ಲಿ ಬಸ್ ನಿಲ್ಲಿಸದೆ ಮಾರು ದೂರದವರೆಗೆ ಮುಂದೆ ಸಾಗಿ ನಿಲ್ಲಿಸಿದ್ದಾರೆ. ಹೀಗಾಗಿ ಕೆಲವು ವಿದ್ಯಾರ್ಥಿಗಳು ಓಡಿ ಹೋಗಿ ಬಸ್ ಹಿಡಿದರೆ, ಇನ್ನೂ ಕೆಲವರು ನಿರಾಶರಾಗಿ ವಾಪಸ್ ಬಂದು ಬೇರೆ ಬಸ್ಗಾಗಿ ಕಾದಿದ್ದಾರೆ. ಈ ದೃಶ್ಯವನ್ನು ಕಾಲೇಜಿನ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ: ಕೋಡಿಹಳ್ಳಿ ನೇತೃತ್ವದಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಪ್ರತಿಭಟನೆ
ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಕಾರಣ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಧಿಕ ಹಣ ನೀಡಿ ಆಟೋದಲ್ಲಿ ಸಂಚರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಕೂಡಲೇ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುವಂತೆಯೂ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.