ಭಟ್ಕಳ(ಉತ್ತರ ಕನ್ನಡ): ಪಟ್ಟಣದಲ್ಲಿ ಲಾಕ್‍ಡೌನ್ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಜನರನ್ನ ನಿಯಂತ್ರಿಸಲು ಪೊಲೀಸ್ ಇಲಾಖೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ. ಅದಕ್ಕಾಗಿ ಡ್ರೋನ್ ಕ್ಯಾಮರಾ ಮೂಲಕ ಜನರ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಭಟ್ಕಳದ ಜಾಲಿ ಪಟ್ಟಣ ಪಂಚಾಯಿತಿ, ಭಟ್ಕಳ ಪುರಸಭೆ ಮತ್ತು ಹೆಬಳೆ ಪಂಚಾಯಿತಿಯಲ್ಲಿ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ ಮಾತ್ರ ವಿನಾಯಿತಿ ನೀಡಿ ನಂತರ ಲಾಕ್‍ಡೌನ್ ಮಾಡಲಾಗಿದೆ. ಆದರೂ ಜನರ ಓಡಾಟ ಕಡಿಮೆಯಾಗಿಲ್ಲ. ಪ್ರತಿ ಬಾರಿಯೂ ಪೊಲೀಸರು ಸ್ಥಳಕ್ಕೆ ತೆರಳಿ ನಿಯಂತ್ರಿಸಬೇಕಾದ ಸ್ಥಿತಿ ಇದೆ. ಆದರೆ, ಇತ್ತೀಚೆಗೆ ಪೊಲೀಸರಲ್ಲಿಯೂ ಸೋಂಕು ಪತ್ತೆಯಾಗುತ್ತಿದ್ದು, ಗ್ರಾಮೀಣ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿರುವವರ ನಿಯಂತ್ರಣ, ಪರಸ್ಪರ ಅಂತರ ಕಾಯ್ದುಕೊಳ್ಳದ ಸ್ಥಳಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಹಾಗೂ ಮಾಸ್ಕ್ ಧರಿಸದೇ ತಿರುಗಾಡುವವರ ಮೇಲೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಭಟ್ಕಳ ಪೊಲೀಸರು ಡ್ರೋನ್ ಕ್ಯಾಮೆರಾದ ಮೊರೆ ಹೋಗಿದ್ದಾರೆ.
ನಗರದ ಶಂಸುದ್ದೀನ ಸರ್ಕಲ್ನಲ್ಲಿ ಸಿಪಿಐ ದಿವಾಕರ ಡ್ರೋನ್ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದ್ದು, ನಂತರ ಪಟ್ಟಣದ ನ್ಯಾಯಾಲಯದ ಬಳಿ, ರಂಗಿನಕಟ್ಟೆ, ಮಾರಿಕಟ್ಟೆ, ರಥಬೀದಿ, ನವಾಯತ್ ಕಾಲನಿ, ಸುಲ್ತಾನ ಸ್ಟ್ರೀಟ್, ಚೌಕ ಬಜಾರ್ ಸೇರಿದಂತೆ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲೂ ಡ್ರೋನ್ ಕಾರ್ಯಾಚರಣೆ ನಡೆಸಿದೆ.
ನಿತ್ಯ ಮಧ್ಯಾಹ್ನ 2 ಗಂಟೆಯ ಬಳಿಕ ಯಾವುದೇ ಸಂದರ್ಭದಲ್ಲಿಯೂ ಡ್ರೋನ್ ಹಾರಾಟ ನಡೆಸಿ ಜನರ ಚಲನವಲನಗಳ ಬಗ್ಗೆ ನಿಗಾ ಇಡಲಾಗುವುದು ನಿಯಮ ಉಲ್ಲಂಘಿಸಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು ಎಂದು ಸಿಪಿಐ ಎಚ್ಚರಿಸಿದ್ದಾರೆ.