ಕಾರವಾರ: ಹಳೆ ಕಟ್ಟಡ ತೆರವು ಮಾಡುವ ವೇಳೆ ಚಿರೆಕಲ್ಲುಗಳು ಬಿದ್ದು ಕೂಲಿಗೆ ಬಂದಿದ್ದ ದಂಪತಿ ಪೈಕಿ ಪತ್ನಿ ಮೃತಪಟ್ಟು, ಪತಿ ಗಂಭೀರ ಗಾಯಗೊಂಡಿರುವ ಘಟನೆ ಕಾರವಾರ ನಗರದ ಸರ್ಕಾರಿ ಪ್ರೌಢಶಾಲೆ ಬಳಿ ನಡೆದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದದ ಸದ್ಯ ಸೋನಾರವಾಡದ ನಿವಾಸಿಯಾಗಿರುವ ಯಮನೂರ ರಾಮವ್ವ ಚಿತವಾಡಗ (36) ಮೃತಪಟ್ಟ ದುರ್ದೈವಿ. ಈಕೆಯ ಪತಿ ಯಮನೂರ ಬಸಪ್ಪ ಚಿತವಾಡಿಗ (40) ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೂಲಿ ಕೆಲಸಕ್ಕೆ ಬಂದು ಇಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು.
ಎಂದಿನಂತೆ ಇಂದು ಕೂಡ ನಗರದ ಪ್ರೌಢ ಶಾಲೆ ಬಳಿಯ ಹಳೆ ಕಟ್ಟಡದ ತೆರವಿಗೆ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ಗೋಡೆಯ ಚಿರೆಕಲ್ಲುಗಳು ಇಬ್ಬರ ಮೇಲೂ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಯಮನೂರ ರಾಮವ್ವ ಚಿತವಾಡಗ ಮೃತಪಟ್ಟಿದ್ದಾಳೆ. ಆಕೆಯ ಗಂಡ ಬಸಪ್ಪನ ಸೊಂಟಕ್ಕೆ ಗಂಭೀರ ಗಾಯವಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಸಿಪಿಐ ಶಿವಕುಮಾರ ನೇತೃತ್ವದ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.