ಕಾರವಾರ: ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ವ್ಯಕ್ತಿಗೆ ರಾಜ್ಯದಿಂದ 5 ಕೆಜಿ ಹಾಗೂ ಕೇಂದ್ರ ಸರ್ಕಾರದಿಂದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಪಡಿತರ ಅಂಗಡಿಗಳ ಮುಖಾಂತರ ವಿತರಿಸಲಾಗುತ್ತದೆ. ಇದು ಬಡವರಿಗೆ ಸಾಕಷ್ಟು ಅನುಕೂಲಕರವೂ ಆಗಿದೆ. ಆದರೆ ಇಂತಹ ಅಕ್ಕಿ ಮೂಲಕ ಲಾಭ ಪಡೆಯಲು ಅಕ್ಕಿ ಚೀಲದಲ್ಲಿ ಇಟ್ಟಂಗಿ ಇಟ್ಟು ಆ ಮೂಲಕ ತೂಕ ಹೆಚ್ಚಿಸುವ ವಾಮ ಮಾರ್ಗ ಅನುಸರಿಸಿರುವುದು ಕಾರವಾರದ ತಾಲ್ಲೂಕಿನ ಕಿನ್ನರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಸಂತೋಷ ಕೊಠಾರಕರ್ ಎನ್ನುವವರು ತಮ್ಮ ಕುಟುಂಬದ 6 ಸದಸ್ಯರ ಹೆಸರಿನಲ್ಲಿ 60 ಕೆಜಿ ಅಕ್ಕಿಯನ್ನು ಪಡಿತರ ಅಂಗಡಿಯಿಂದ ಪಡೆದಿದ್ದರು. ಅಂಗಡಿಯವರು ಚೀಲವನ್ನು ತೆರೆಯದೇ, ಸರಬರಾಜಾಗಿದ್ದ 50 ಕೆಜಿ ಚೀಲ, ಅದರೊಂದಿಗೆ 10 ಕೆಜಿ ಅಕ್ಕಿಯನ್ನು ತೂಕ ಮಾಡಿ ಸಂತೋಷ್ ಅವರಿಗೆ ನೀಡಿದ್ದರು. ಆದರೆ ಮನೆಗೆ ಬಂದು ಡಬ್ಬದಲ್ಲಿ ತುಂಬಿಡಲು ಚೀಲ ಒಡೆದಾಗ ಅಕ್ಕಿಯ ಜೊತೆಗೆ ಇಟ್ಟಂಗಿ ಕಲ್ಲು ಪತ್ತೆಯಾಗಿದ್ದು, ಮನೆಯವರು ಶಾಕ್ ಆಗಿದ್ದಾರೆ.
ನಂತರ ಈ ಬಗ್ಗೆ ಸಂಬಂಧಪಟ್ಟ ರೇಷನ್ ಅಂಗಡಿಯ ಗಮನಕ್ಕೆ ತರಲಾಗಿದೆ. ಆದರೆ ಬಡವರಿಗೆ ನೀಡುವ ಅಕ್ಕಿಯಲ್ಲಿ ಈ ರಿತಿ ಗೋಲ್ಮಾಲ್ ಮಾಡುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಗ್ರಾಹಕ ಸಂತೋಷ್ ಕೊಠಾರಕರ್ ಒತ್ತಾಯಿಸಿದ್ದಾರೆ.
ಪಡಿತರ ಅಂಗಡಿಯಲ್ಲಿ ರೇಶನ್ ಸ್ಟಾಕ್ ಬರುವ ವೇಳೆ ಗ್ರಾಹಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿಯೊಂದು ಕುಟುಂಬಕ್ಕೂ ಪಡಿತರ ನೀಡುವ ಮುನ್ನ ಚೆಕ್ ಮಾಡಿ ನೀಡಬೇಕೆಂದು ಸರ್ಕಾರದ ನಿಯಮವಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಾಗುತ್ತಿರುವ ಕಾರಣಕ್ಕೆ ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಬ್ಯಾಗ್ ಪರಿಶೀಲಿಸದೇ ಹಾಗೆಯೇ ನೀಡಲಾಗುತ್ತಿದೆ.
ಅಲ್ಲದೆ ಸರ್ವರ್ ಸಮಸ್ಯೆ ಕಾರಣಕ್ಕೆ ಗ್ರಾಹಕರಿಗೆ ಬೇಗಬೇಗ ಸಾಮಾನು ಕೊಟ್ಟು ಕಳುಹಿಸಲಾಗುತ್ತಿದೆ. ಅಲ್ಲದೇ ಚೀಲ 50 ಕೆಜಿ ಇರೋದ್ರಿಂದ ಐದಕ್ಕಿಂತ ಹೆಚ್ಚು ಕುಟುಂಬದ ಸದಸ್ಯರಿದ್ದಲ್ಲಿ 50 ಕೆಜಿ ಇರುವ ಬ್ಯಾಗನ್ನು ನೇರವಾಗಿ ನೀಡಲಾಗುತ್ತಿದೆ. ಹೀಗಾಗಿ ರೈಸ್ ಬ್ಯಾಗಿನಲ್ಲಿ ಇಟ್ಟಂಗಿ ಇರುವುದು ಗೊತ್ತಾಗದೆ ಹಾಗೇ ನೀಡಲಾಗಿದೆ. ಆದರೆ ಈ ಬಗ್ಗೆ ಗಮನಕ್ಕೆ ಬಂದ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪಡಿತರ ವಿತರಣೆ ಮಾಡುವ ಸಿಬ್ಬಂದಿ ಪ್ರಕಾಶ ನಾಗೇಕರ ಹೇಳಿದರು.
ಸಾಮಾನ್ಯವಾಗಿ ಛತ್ತಿಸಗಢ್ ಮತ್ತು ಆಂದ್ರಪ್ರದೇಶ ಕಡೆಗಳಿಂದ ಅಕ್ಕಿ ಸರಬರಾಜಾಗುತ್ತದೆ. ರೈಲ್ವೆ ಮೂಲಕ ಬರುವಾಗ ಅಚಾನಕ್ ಆಗಿ ಸೇರಿರೋ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅಕ್ಕಿಯ ತೂಕ ಹೆಚ್ಚಾಗುವ ಕಾರಣಕ್ಕೆ ಇಟ್ಟಂಗಿ ಕಲ್ಲುಗಳನ್ನು ಸೇರಿಸಿರುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹಿಸಿದ್ದಾರೆ.