ಕಾರವಾರ: ಸುವರ್ಣ ತ್ರಿಭುಜ ಬೋಟ್ ಮೂಲಕ ಮೀನುಗಾರಿಕೆಗೆ ತೆರಳಿದ 7 ಮೀನುಗಾರರು ನಾಪತ್ತೆಯಾಗಿ 3 ತಿಂಗಳೇ ಕಳೆದಿದೆ. ಆದರೆ ಈವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇದರಿಂದ ಮೀನುಗಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.
ಕಳೆದ ಡಿಸೆಂಬರ್ 13 ರಂದು ಉಡುಪಿಯ ಮಲ್ಪೆ ಬಂದರಿನಿಂದ ಸುವರ್ಣ ತ್ರಿಭುಜ ಬೋಟ್ ಮೂಲಕ ಮೀನುಗಾರಿಕೆಗೆ ತೆರಳಿದ ಉತ್ತರಕನ್ನಡ ಜಿಲ್ಲೆಯ 5 ಹಾಗೂ ಉಡುಪಿಯ ಇಬ್ಬರು ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಕಳೆದಿದೆ. ಕಾಣೆಯಾದವರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹುಡುಕಾಟ ನಡೆಸಿವೆಯಾದರು ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸರ್ಕಾರಗಳ ಪ್ರಯತ್ನದ ಮೇಲೆ ನಂಬಿಕೆ ಇಟ್ಟಿದ್ದ ಮೀನುಗಾರ ಕುಟುಂಬದವರು ಹಾಗೂ ಮೀನುಗಾರ ಸಮುದಾಯದವರು ಇದೀಗ ಸಹನೆ ಕಳೆದುಕೊಂಡಿದ್ದಾರೆ.
ಎಲ್ಲ ವಿಷಯದಲ್ಲಿಯೂ ಮೀನುಗಾರರನ್ನು ಸರ್ಕಾರಗಳು ಕಡೆಗಣಿಸುತ್ತಿವೆ. ಇದು ಹೀಗೆ ಮುಂದುವರಿದಲ್ಲಿ ಮೀನುಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಕಳೆದುಕೊಂಡ ಮೀನುಗಾರರನ್ನು ಪತ್ತೆಹಚ್ಚಲು ಹೆಚ್ಚಿನ ಒತ್ತಡ ಹಾಕುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಅಸ್ತ್ರವಾಗಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಗಳ ಹುಡುಕಾಟದ ಪ್ರಯತ್ನದ ಮೇಲೆ ಅನುಮಾನ ವ್ಯಕ್ತಪಡಿಸಿದ ಮೀನುಗಾರರು ಅಸಮಾಧಾನ ಹೊರ ಹಾಕಿದ್ದಾರೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೀನುಗಾರರನ್ನು ಪತ್ತೆ ಹಚ್ಚಲು ಇಷ್ಟು ದಿನ ಬೇಕಾಗಿಲ್ಲ. ಮೀನುಗಾರರು ಎಲ್ಲಿದ್ದಾರೆ..? ಹೇಗಿದ್ದಾರೆ ಎಂಬುದನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಲು ನಮ್ಮ ವ್ಯವಸ್ಥೆಗೆ ಸಾಧ್ಯವಿದೆ. ಆದರೆ ನೌಕಾಪಡೆ, ಭಾರತೀಯ ತಟರಕ್ಷಕ ದಳ, ಕರಾವಳಿ ಕಾವಲು ಪಡೆಯವರನ್ನು ಬಳಸಿಕೊಂಡು ಸಹ ಮೂರು ತಿಂಗಳಿಂದ ಸಣ್ಣ ಸುಳಿವು ಪತ್ತೆಯಾಗದಿರುವುದರಿಂದ ಪ್ರಯತ್ನದ ಬಗ್ಗೆಯೇ ಹಲವು ಅನುಮಾನಗಳು ಮೂಡುವಂತೆ ಮಾಡಿದೆ ಎಂದು ಉತ್ತರಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲೆಯಿಂದ ಐದು ಭಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಹೆಗಡೆ ಮೀನುಗಾರ ಸಮುದಾಯದವರನ್ನು ಮರೆತಿದ್ದಾರೆ. ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಕಳೆದರು ಅವರು ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ನಾಪತ್ತೆಯಾದ ಬೋಟ್ ಕೊನೆಯದಾಗಿ ಮಹಾರಾಷ್ಟ್ರದ ಸಿಂಧೂದುರ್ಗ ಬಳಿ ಸಿಗ್ನಲ್ ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದರು ತಮ್ಮ ಒತ್ತಡವನ್ನು ಹಾಕಿ ಮೀನುಗಾರರನ್ನು ಹುಡುಕಿಸಿಕೊಡುವ ಪ್ರಯತ್ನ ಮಾಡಿಲ್ಲ. ಇನ್ನಾದರು ಅವರು ಚುನಾವಣೆಯೊಳಗೆ ಮೀನುಗಾರರನ್ನು ಹುಡುಕಿಕೊಡಬೇಕು. ಇಲ್ಲವಾದಲ್ಲಿ ಮೀನುಗಾರ ಸಮುದಾಯದವರು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಕರಾವಳಿಯ ಮೀನುಗಾರರು ಈ ಭಾರಿ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಮೀನುಗಾರ ಮುಖಂಡರು ಚರ್ಚೆ ನಡೆಸಿದ್ದು, ಮಾ.25 ರಂದು ಜಿಲ್ಲೆಯ ಎಲ್ಲ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಬಹಿಷ್ಕಾರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.