ಕಾರವಾರ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಅವಧಿಯ ಎರಡನೇ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದು, ಈ ಬಜೆಟ್ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಹಾಗಾಗಿ ಅದು ಸಾಕಾರಗೊಳ್ಳುವುದೇ ಎನ್ನುವ ಕುತೂಹಲ ಇದೀಗ ಜನರಲ್ಲಿ ಮೂಡಿದೆ.
ಹೌದು.., ಕಳೆದ ಬಾರಿ ಬಜೆಟ್ನಲ್ಲಿ ಜಿಲ್ಲೆಯ ಎರಡು ತಾಲೂಕುಗಳಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದನ್ನು ಬಿಟ್ಟರೆ ಜಿಲ್ಲೆಗೆ ಬೇರೆ ಯಾವುದೇ ಪ್ಯಾಕೇಜ್ ಅನುದಾನ ಘೋಷಣೆ ಆಗಿರಲಿಲ್ಲ. ಇದರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಕಳೆದ ಬಜೆಟ್ ಮಂಡನೆಯಾಗಿ ಏಳು ತಿಂಗಳು ಕಳೆದರೂ ಇಸ್ರೇಲ್ ಕೃಷಿ ಪದ್ಧತಿ ಅಳವಡಿಕೆ ಇನ್ನೂ ಕಾಗದ ಪತ್ರದಲ್ಲಿಯೇ ಉಳಿದುಕೊಂಡಿದೆ. ಇದರಿಂದ ಹಳೆ ಭರವಸೆಗಳನ್ನು ಈಡೇರಿಸುವುದರ ಜೊತೆಗೆ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲೆಯ ಬೇಡಿಕೆಗಳೇನು?
ಅರಣ್ಯ ಹಕ್ಕುಪತ್ರದ ನಿಯಮ ಸಡಿಲಿಸಲು ಒತ್ತಾಯ:
ಉತ್ತರ ಕನ್ನಡ ಜಿಲ್ಲೆ ಬಹುತೇಕ ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿನ ಹೆಚ್ಚಿನ ಜನರು ಕಳೆದ ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶದಂಚಿನಲ್ಲಿ ವಾಸವಾಗಿ, ಅರಣ್ಯ ಭೂಮಿಯಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಮೂರು ತಲೆಮಾರಿನ ದಾಖಲೆ ಕೇಳಿ ತಿರಸ್ಕರಿಸಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಅತಿಕ್ರಮಣ ಅರ್ಜಿದಾರರು ಕಾರವಾರದಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸಿದ್ದು, ಬೆಂಗಳೂರು ಚಲೋ ಹೋರಾಟ ಕೂಡ ಘೊಷಣೆ ಮಾಡಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯಿಸಿದ್ದರಿಂದ ಹಕ್ಕುಪತ್ರ ವಿತರಣೆಗೆ ನಿಯಮ ಸಡಿಲಿಸಬೇಕೆಂಬ ಆಗ್ರಹ ಕೂಡ ಜಿಲ್ಲೆಯ ಜನರದ್ದಾಗಿದೆ.
ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಬರಲಿ:
ಜಿಲ್ಲೆಯ ಬಹುಮುಖ್ಯ ಸಮಸ್ಯೆಯಲ್ಲೊಂದಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೈಗಾರಿಕೆಗಳನ್ನು ತರಬೇಕು ಎನ್ನುವ ಒತ್ತಾಯವನ್ನು ಕಂದಾಯ ಸಚಿವರು ಆಗಿರುವ ಆರ್.ವಿ.ದೇಶಪಾಂಡೆ ಬಳಿ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ಜನರು ಉದ್ಯೋಗ ಅರಸಿ ಗೋವಾ ತೆರಳುವುದರಿಂದ ಇಲ್ಲಿಯೇ ಅವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ತರಬೇಕು. ಆ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕರಲ್ಲಿದೆ.
ಉಪ್ಪು ನೀರಿನ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರಕ್ಕೆ ಮನವಿ:
ಕರಾವಳಿ ಭಾಗದ ಪ್ರಮುಖ ಸಮಸ್ಯೆಗಳಲ್ಲೊಂದಾದ ಸಮುದ್ರದ ಹಿನ್ನೀರಿನಿಂದ ಸುತ್ತಮುತ್ತಲಿನ ಭಾಗದ ಕೃಷಿ ಭೂಮಿಗಳಿಗೆ ನುಗ್ಗುವ ಉಪ್ಪು ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಒತ್ತಾಯ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ಒತ್ತಾಯಿಸಿದ್ದು, ಕರಾವಳಿ ಭಾಗದ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಅನುದಾನ ಘೋಷಣೆ ಮಾಡಿ ಉಪ್ಪು ನೀರು ನುಗ್ಗದಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯವಿದೆ.
ಜೈಲು ಸ್ಥಳಾಂತರ ನನೆಗುದಿಗೆ:
ಕಾರವಾರ ಕೊಡಿಭಾಗದ ಬಳಿ ಇರುವ ಜೈಲನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅದನ್ನು ಸಾಕಾರಗೊಳಿಸುವಲ್ಲಿ ತದನಂತರ ಬಂದ ಸರ್ಕಾರ ವಿಫಲವಾಗಿದೆ. ಜೈಲ್ ಪಕ್ಕದಲ್ಲಿರುವ ಮೆಡಿಕಲ್ ಕಾಲೇಜಿಗೆ ಸ್ಥಳಾವಕಾಶದ ಅವಶ್ಯಕತೆ ಇರುವುದರಿಂದ ಮತ್ತು ಹಳೆಯಾದದ ಜೈಲನ್ನು ಅಂಕೋಲಾದ ಬೆಳಸೆ ಬಳಿ ಸ್ಥಳಾಂತರಿಸಲು ಜಾಗ ಗುರುತಿಸಲಾಗಿತ್ತು. ಆದರೆ ಬಳಿಕ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಾರಿಯಾದರೂ ಜೈಲನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಅನುದಾನ ಘೋಷಣೆ ಆಗುವುದೇ ಎನ್ನುವ ಭರವಸೆಯಲ್ಲಿ ಜನರಿದ್ದಾರೆ.
ಇದಲ್ಲದೆ ಶಿರಸಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂಬ ಒತ್ತಾಯ ಕಳೆದ ಹಲವು ವರ್ಷದಿಂದ ಕೇಳಿಬರುತ್ತಿದೆ. ಹಾಗೆಯೇ ಜಿಲ್ಲೆಯ ಹೆಚ್ಚಿನ ಭಾಗದ ಜನರು ಆಸಾಮಿ ಸಾಲ ಹೊಂದಿದ್ದು, ಅದನ್ನು ಮನ್ನಾ ಮಾಡಬೇಕು ಎನ್ನುವುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ.