ಶಿರಸಿ(ಉತ್ತರ ಕನ್ನಡ): ಕೊರೊನಾ ಸಂಕಷ್ಟದಲ್ಲೂ ಪರೀಕ್ಷೆ ಬರೆದಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಹೊರಬಿದ್ದಿದೆ. ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ಸೇರಿ 6 ವಿದ್ಯಾರ್ಥಿಗಳು ಈ ಬಾರಿಯ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸನ್ನಿಧಿ ಹೆಗಡೆ 625 ಕ್ಕೆ 625 ಅಂಕ ಗಳಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಶಿರಸಿಯ ಪ್ರಗತಿ ನಗರದ ಮಹಾಬಲೇಶ್ವರ ಹೆಗಡೆ ಹಾಗೂ ವೀಣಾ ಹೆಗಡೆ ದಂಪತಿಯ ಪುತ್ರಿಯಾಗಿರುವ ಸನ್ನಿಧಿ ಮೊದಲ ಸ್ಥಾನ ಪಡೆದಿದ್ದಾಳೆ. ಅವರ ತಂದೆ ಕಾರವಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಕೆ ಕಳೆದ ಹಲವು ವರ್ಷಗಳಿಂದ ಉತ್ತಮ ಸಾಧನೆ ಮಾಡಿಕೊಂಡು ಬಂದಿರುವ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಈಕೆಯ ಸಾಧನೆಗೆ ಶಿಕ್ಷಕ ವೃಂದ ಹಾಗೂ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಸಂತಸ ಹಂಚಿಕೊಂಡಿರುವ ಟಾಪರ್ ಸನ್ನಿಧಿ, ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದಿದ್ದಾರೆ.