ಕಾರವಾರ: ಬೆಂಗಳೂರಿನಿಂದ ಆಗಮಿಸಿದ್ದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದಾಪುರದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಭಾಗಿಯಾಗಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರೂ ಆಗಿರುವ ಕಾಗೇರಿ, ಭಾನುವಾರ ಸಿದ್ದಾಪುರದಲ್ಲಿ ನಿಗದಿಯಾಗಿದ್ದ ಆಪ್ತರ ಮದುವೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಕೊರೊನಾ ಹಾಟ್‌ಸ್ಪಾಟ್ ಆಗಿರುವ ಬೆಂಗಳೂರಿನಿಂದ ಆಗಮಿಸಿದ್ದರೂ ಕೂಡ ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸದೇ ಅವರು ಪಾಲ್ಗೊಂಡಿದ್ದರು.
ರಾಜಕಾರಣಿಗಳು ಮದುವೆ, ಸಭೆ-ಸಮಾರಂಭಗಳಲ್ಲಿ ಹೇಗೆ ಬೇಕೋ ಹಾಗೆ ಓಡಾಡಿದ್ರೂ ನಡೆಯುತ್ತದೆ. ಆದರೆ ಜನಸಾಮಾನ್ಯರು ಓಡಾಡಿದ್ರೆ ಪೊಲೀಸರು ಲಾಠಿ ತೆಗೆದುಕೊಂಡು ಹೊಡೆಯುತ್ತಾರೆ. ಇಲ್ಲವೇ ದಂಡ ವಸೂಲಿ ಮಾಡುತ್ತಾರೆ ಎಂದು ಟೀಕಿಸಿದ ಆಡಿಯೋ ವೈರಲ್ ಆಗಿದೆ.