ಕಾರವಾರ: ಸರ್ಕಾರ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಕಳೆದ ಹಲವು ವರ್ಷಗಳ ಹಿಂದೆ ಮನೆ ಮಂಜೂರು ಮಾಡಿದೆ. ಈ ಪೈಕಿ ಕೆಲವರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಕಾರವಾರ ನಗರಸಭೆ ಇನ್ನೂ ಕೆಲವರಿಗೆ ಈವರೆಗೂ ಮನೆ ನಿರ್ಮಾಣ ಮಾಡಿಲ್ಲ. ಆದರೆ ಮನೆ ನಿರ್ಮಾಣದ ಭರವಸೆಯಲ್ಲಿಯೇ ಬಾಡಿಗೆ ಮನೆಗಳಲ್ಲಿ ಕಾಲ ಕಳೆಯುತ್ತಿರುವ ಪೌರ ಕಾರ್ಮಿಕರು ಇದೀಗ ತಮಗೆ ಮಂಜೂರಾದ ಮನೆ ನಿರ್ಮಾಣಕ್ಕೆ ಪಟ್ಟು ಹಿಡಿದು ಆಗ್ರಹಿಸಿದ್ದಾರೆ.
ಹೌದು, ಕಾರವಾರದ ನಗರಸಭೆಯ ಪೌರಕಾರ್ಮಿಕರಿಗಾಗಿ ಅಂದಿನ ಸರ್ಕಾರ ಗೃಹಭಾಗ್ಯ ಯೋಜನೆ ರೂಪಿಸಿತ್ತು. ಹಿರಿತನದ ಆಧಾರದ ಮೇಲೆ ಆಯ್ದ ಪೌರ ಕಾರ್ಮಿಕರಿಗೆ ಸ್ವಂತ ಮನೆ ಕಟ್ಟಿಕೊಡುವ ಯೋಜನೆ ಇದಾಗಿತ್ತು. ಅದರಂತೆ ಕಾರವಾರ ನಗರಸಭೆಯಿಂದ 34 ಮಂದಿ ಪೌರ ಕಾರ್ಮಿಕರು ಈ ಯೋಜನೆಯಡಿ ಆಯ್ಕೆಯಾಗಿದ್ದರು. ಒಂದು ಮನೆಗೆ 7.5 ಲಕ್ಷದಂತೆ ಸರ್ಕಾರ ಅನುದಾನ ಒದಗಿಸಿದ್ದು, ಮನೆಯೊಂದಕ್ಕೆ ಒಟ್ಟು 11.50 ಲಕ್ಷ ವೆಚ್ಚದಂತೆ ಮೊದಲ ಹಂತದಲ್ಲಿ 16 ಮನೆಗಳ ಅಪಾರ್ಟ್‌ಮೆಂಟ್‌ನ್ನು ನಿರ್ಮಿಸಿಕೊಡಲಾಗಿತ್ತು.
ಒಂದೇ ಕಡೆ ಜಾಗ ಲಭ್ಯವಾಗದ ಹಿನ್ನೆಲೆಯಲ್ಲಿ ಉಳಿದ ಪೌರ ಕಾರ್ಮಿಕರಿಗೆ ಬೇರೆ ಕಡೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ನಗರಸಭೆ ತಿಳಿಸಿತ್ತು. ಆದರೆ ಇದೀಗ ನಾಲ್ಕು ವರ್ಷ ಕಳೆದರೂ ಸಹ ಉಳಿದ 18 ಮಂದಿ ಪೌರ ಕಾರ್ಮಿಕರಿಗೆ ಮನೆ ಲಭ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಜಾಗದ ಸಮಸ್ಯೆ ನೆಪ ಹೇಳಿ ಮನೆ ಕಟ್ಟಿಕೊಡಲು ನಿರಾಸಕ್ತಿ ತೋರಿಸುತ್ತಿದ್ದು, ಈ ನಿಟ್ಟಿನಲ್ಲಿ ಮನೆ ಕಟ್ಟಿಕೊಡುವಂತೆ ಪೌರ ಕಾರ್ಮಿಕ ನಾರಾಯಣ ಮಾದಿಗ ಆಗ್ರಹಿಸಿದ್ದಾರೆ.
ಇನ್ನು ಕಾರವಾರ ನಗರಸಭೆಯಲ್ಲಿ ಹಲವಾರು ಮಂದಿ ಹತ್ತಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು, ಈಗಾಗಲೇ ಸಾಕಷ್ಟು ಮಂದಿ ನಿವೃತ್ತಿ ಹೊಂದಿದ್ದಾರೆ. ಖಾಯಂ ಪೌರ ಕಾರ್ಮಿಕರಿಗೆ ನಗರಸಭೆ ಕ್ವಾಟ್ರಸ್‌ಗಳನ್ನು ನೀಡಲಾಗುತ್ತದೆಯಾದರೂ ಬರುವ ವೇತನದಲ್ಲಿ ಬಾಡಿಗೆ ಹಣವನ್ನು ಕಡಿತಗೊಳಿಸುವುದರಿಂದ ಜೀವನ ನಿರ್ವಹಣೆಗೆ ಆರ್ಥಿಕ ತೊಂದರೆಯಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಬರುವ ವೇತನದಲ್ಲಿ ಮನೆ ನಿರ್ವಹಣೆ, ಮಕ್ಕಳ ಶಾಲೆ, ಕಾಲೇಜಿನ ಫೀಸ್ ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳಬೇಕಿದ್ದು, ಸ್ವಂತ ಮನೆ ಲಭ್ಯವಾದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೇ ನಿವೃತ್ತಿ ಹೊಂದಿದವರು ಬಾಡಿಗೆ ಮನೆಗೆ ಸ್ಥಳಾಂತರವಾಗಬೇಕಿದ್ದು, ಕಾರವಾರದಲ್ಲಿ ಮನೆಗಳ ಬಾಡಿಗೆ ಗಗನಕ್ಕೇರಿರುವ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೂಡಲೇ ಜಿಲ್ಲಾಡಳಿತ ನಗರಸಭೆ ನಮಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಪೌರ ಕಾರ್ಮಿಕ ಪ್ರಕಾಶ್ ಕವಲಕುಂಟ್ಲ ಒತ್ತಾಯಿಸಿದ್ದಾರೆ.
ಇನ್ನು, ಈ ಬಗ್ಗೆ ಪೌರಾಯುಕ್ತ ಚಂದ್ರಮೌಳಿ ಅವರನ್ನು ಮಾತನಾಡಿಸಿದಾಗ, 34 ಪೌರ ಕಾರ್ಮಿಕರ ಪೈಕಿ 16 ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನೀಡಲಾಗಿದೆ. ಉಳಿದವರಿಗೆ ಗಾಂಧಿನಗರದಲ್ಲಿ ಎರಡು ಕಡೆ ತಲಾ 9 ಮನೆ ಕಟ್ಟಲು ಜಾಗ ಗುರುತಿಸಿ ಜಿಲ್ಲಾಧಿಕಾರಿ ಅನುಮೋದನೆಗೆ ಕಳುಹಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಉಳಿದ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ನೀಡಲು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಒಟ್ಟಾರೆ ಗೃಹಭಾಗ್ಯದ ಆಸೆ ತೋರಿಸಿ ಕೆಲವೇ ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಟ್ಟು, ಇನ್ನುಳಿದವರಿಗೆ ಮನೆ ನೀಡದಿರೋದು ವಿಪರ್ಯಾಸ. ಇನ್ನಾದ್ರೂ ಈ ಬಗ್ಗೆ ಸರ್ಕಾರ ಗಮನಹರಿಸಿ ಆದಷ್ಟು ಬೇಗ ಉಳಿದ ಪೌರ ಕಾರ್ಮಿಕರಿಗೂ ಆಶ್ರಯ ಕಲ್ಪಿಸಿದರೆ ಆ ಕುಟುಂಬಗಳಿಗೆ ನೆರವಾಗಲಿದೆ.
ಇದನ್ನೂ ಓದಿ : ತುಮಕೂರು ನಗರ ಪಾಲಿಕೆ ಪೌರ ಕಾರ್ಮಿಕರ ಖಾಯಂ ಆದೇಶಕ್ಕೆ ತಡೆ