ಶಿರಸಿ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವ ಹಾಗೂ ಬಸ್ ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿ ಮುಂಗಟ್ಟುಗಳಿಗೆ ಪೊಲೀಸರು ದಂಡ ವಿಧಿಸಿದರು.
ಶಿರಸಿ ವೃತ್ತ ನಿರೀಕ್ಷಕರಾದ ಬಿ.ಯು.ಪ್ರದೀಪ್ ನೇತೃತ್ವದಲ್ಲಿ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ಹಾಗೂ ನಗರ ಠಾಣೆ ಪಿ.ಎಸ್.ಐ ಶಿವಾನಂದ ನಾವದಗಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ನಗರದ ಬಿಡ್ಕಿ ಬೈಲ್, ಸಿ.ಪಿ.ಬಜಾರ್, ದೇವಿಕೆರೆ ಅಶ್ವಿನಿ ವೃತ್ತ ,ಹಳೆ ಬಸ್ ನಿಲ್ದಾಣ, ಕೋಟೆಕೆರೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದ ಸಾರ್ವಜನಿಕರ ಮೇಲೆ 60 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 8200/- ರೂ ದಂಡ ವಿಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರು ತಮ್ಮ ಹಾಗೂ ಇತರರ ಆರೋಗ್ಯ ಸುರಕ್ಷತೆಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿ ರೋಗ ಹರಡಲು ಕಾರಣರಾದವರಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ ಡಿಎಸ್ಪಿ ಗೋಪಾಲಕೃಷ್ಣ ನಾಯಕ ಎಚ್ಚರಿಕೆ ನೀಡಿದ್ದಾರೆ.