ಕಾರವಾರ : ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸರಿಗಮಪ ಸೀಸನ್ 15ರ ರನ್ನರ್ ಅಪ್ ಆಗಿದ್ದ ಹಾಗೂ ಜನಪದ ಗೀತೆಗಳ ಮೂಲಕ ರಾಜ್ಯದ ಜನರ ಮನ ಗೆದ್ದಿದ್ದ ಹಾವೇರಿಯ ಹನುಮಂತನ ಕುರಿತು ಇದೀಗ ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂದ ಸುದ್ದಿಗೆ ಸ್ವತಃ ಹನಮಂತ ಸೇರಿದಂತೆ ಜಿಲ್ಲೆಯಿಂದ ಇತರೆ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡವರು ಸ್ಪಷ್ಟನೆ ನೀಡಿದ್ದಾರೆ.
ಓದಿ: ಗಾಯಕ ಹನುಮಂತನ ಮನೆಗೆ ಭೇಟಿ ನೀಡಿದ ಲಿಟಲ್ ಸಿಂಗರ್ ಜ್ಞಾನೇಶ್
ಕುರಿಗಾಹಿ, ಜನಪದ ಗಾಯನಗಳ ಮೂಲಕ ರಾಜ್ಯದ ಜನರನ್ನು ಮೋಡಿ ಮಾಡಿದ್ದ ಹನುಮಂತ, ಜ.1ರಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಆಗಮಿಸಿದ್ದರು. ಬಳಿಕ ಅಲ್ಲಿಂದ ವಾಪಸ್ ಮರಳುವಾಗ ಕುಮಟಾ ಪಟ್ಟಣದ ವರ್ಷಾ ಬೇಕರಿಗೆ ತೆರಳಿದ್ದು, ಹನುಮಂತನನ್ನು ಗುರುತಿಸಿದ ಬೇಕರಿಯ ಮಾಲಕಿ ತಾರಾ ಗೌಡ ಕುಶಲೋಪರಿ ವಿಚಾರಿಸಿದ್ದಾರೆ. ಅಷ್ಟರಲ್ಲಿ ಜನ ಕೂಡ ಸೇರಿದ್ದು, ಕೂತುಹಲದಿಂದ ಸ್ವಲ್ಪ ಸಮಯ ಮಾತನಾಡಿಸಿದ್ದಾರೆ.
ಪತ್ರಿಕೆಯಲ್ಲಿ ಬಂದದ್ದು ಏನು?: ಆದರೆ, ಆತ ಬಂದು ಹೋದ ಎರಡು ದಿನಗಳ ಬಳಿಕ ಸ್ಥಳೀಯ ಪತ್ರಿಕೆಯೊಂದರಲ್ಲಿ 'ಬೇಕರಿ ಹೊಕ್ಕಿ ಬದುಕಬೇಕುರೀ ಎಂದ ಸಿಂಗರ್ ಹನುಮಂತು' ಎಂಬ ಶೀರ್ಷಿಕೆಯೊಂದಿಗೆ ಹಾಗೂ 'ರಿಯಾಲಿಟಿ ಶೋಗಳು ಪಕ್ಕಾ ಬಂಡಲ್' ಎಂಬ ಬಾಕ್ಸ್ ಐಟಮ್‌ನೊಂದಿಗೆ ಸುದ್ದಿ ಪ್ರಕಟವಾಗಿದೆ.
ತಮಗೆ ಪ್ಲಾಟ್ ಕೊಡುವುದಾಗಿ ಹೇಳಿದ್ದರು. ಆದರೆ, ಈವರೆಗೂ ನೋಂದಣಿ ಕೆಲಸವೇ ಆಗಿಲ್ಲ. ಅವೆಲ್ಲವೂ ಕ್ಯಾಮೆರಾ ಎದುರು ಹೇಳುವ ಆಶ್ವಾಸನೆ ಎಂದು ಅನಿಸುತ್ತಿದೆ. ಪ್ರಚಾರಕ್ಕಾಗಿ ಏನೇನೂ ಹೇಳಿ ನಮ್ಮಂತ ಕುರಿಗಾಹಿಗಳ ಬದುಕಲ್ಲಿ ಆಸೆ ಹುಟ್ಟಿಸುತ್ತಾರೆ. ಅದರ ಬದಲು ಕಲೆ ಮೆಚ್ಚಿ ಕಳುಹಿಸಿದರೆ ನಾವು ಯಾವುದಕ್ಕೂ ಆಸೆ ಪಡದೆ ಮೊದಲಿನಂತೆ ಬದುಕುತ್ತೇವೆ.
ನನಗೆ ಹಾಡುವುದು ಇಷ್ಟ, ನಿಮ್ಮ ಊರು ಅಥವಾ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಇದ್ದರೆ ಮಾಹಿತಿ ನೀಡಿ. ನಾನು ಬಂದು ಸಂಗೀತ ಕಾರ್ಯಕ್ರಮ ನೀಡಲು ಸಿದ್ಧ. ಹಣದ ಮುಖ ನೋಡಿ ಬರುವ ಮನಸ್ಸಿಲ್ಲ. ಬದಲಾಗಿ ನನ್ನ ಕಲೆ ಜೀವಂತವಾಗಿರಲಿ ಎನ್ನುವ ಕಾರಣಕ್ಕೆ' ಎಂದು ವಿಶ್ವಾಸದ ನೋಟ ಬೀರಿ ಹೇಳಿದ್ದಾರೆ ಎಂದು ಸುದ್ದಿ ಪ್ರಕಟವಾಗಿದೆ.
ಆದರೆ, ಈ ಸುದ್ದಿಯ ಪತ್ರಿಕಾ ತುಣುಕು ಸಾಕಷ್ಟು ವೈರಲ್ ಆಗಿದ್ದು, ಅನೇಕರು ರಿಯಾಲಿಟಿ ಶೋಗಳ ಬಗ್ಗೆ ಕಿಡಿಕಾರಿದ್ರೆ, ಇನ್ನಷ್ಟು ಮಂದಿ ಸುದ್ದಿ ಶುದ್ಧ ಸುಳ್ಳು ಎಂದು ವರದಿಯ ಬಗ್ಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಿದ್ದಾರೆ.
ಸ್ಪಷ್ಟನೆ ನೀಡಿದ ಹನುಮಂತ : ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾದ ಹಿನ್ನೆಲೆ, ಈ ಬಗ್ಗೆ ಹನುಮಂತ ಸಹ ಸ್ಪಷ್ಟನೆ ನೀಡಿದ್ದಾರೆ. ನಾನು ಕುಮಟಾಕ್ಕೆ ಹೋಗಿದ್ದು ನಿಜ. ನನ್ನ ಜೊತೆ ಅಣ್ಣ ಸಹ ಇದ್ದರು, ಪತ್ರಿಕೆಯಲ್ಲಿ ಬಂದಂತೆ ನಾನು ಏನೂ ಹೇಳಿಲ್ಲ. ಜೀ ಕನ್ನಡ ಅನ್ನ ಕೊಟ್ಟು ಹೆಸರು ಕೊಟ್ಟಿದೆ. ನನಗೆ ಪ್ಲಾಟ್ ಕೊಡದೇ ಇರೋದು ನಿಜ. ಆದರೆ, ಪ್ಲಾಟ್ ಬದಲು ಅದೇ ಮೌಲ್ಯದ 21 ಲಕ್ಷ ರೂಪಾಯಿ ನೀಡಿದ್ದಾರೆ. ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬಂದಿದ್ದು ಕೇಳಿ ನಂಗೆ ಬಾಳ ಬೇಜಾರಾಗಿದೆ. ನಾನ್ಯಾಕೆ ಹಾಗೆಲ್ಲ ಹೇಳಲಿರೀ.. ಈ ತರ ಯಾಕೆ ಬರೆದಿದ್ದಾರೆ ಅಂತಾ ನಂಗೆ ಗೊತ್ತಿಲ್ಲ ಎಂದಿದ್ದಾರೆ.