ಕಾರವಾರ: ಕೆಪಿಸಿಎಲ್ ಅಧಿಕಾರಿಗಳು ಮುನ್ನೆಚರಿಕೆ ನೀಡದೇ ಜಲಾಶಯದಿಂದ ನೀರು ಬಿಟ್ಟ ಕಾರಣ ಪ್ರವಾಹ ಸಂಭವಿಸಿದ್ದು, ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾರವಾರದ ಕದ್ರಾ ಹಾಗೂ ಮಲ್ಲಾಪುರ ನೆರೆ ಹಾವಳಿ ಪ್ರದೇಶಗಳನ್ನು ವೀಕ್ಷಣೆ ಮಾಡಿ ಸಂತ್ರಸ್ತರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರಿಗೆ ಮಾತನಾಡಿದರು.
ಕದ್ರಾ ಜಲಾಶಯದಿಂದ ನೀರು ಭರ್ತಿಯಾದಾಗ ಕೆಪಿಸಿಎಲ್ ಅಧಿಕಾರಿಗಳು ನದಿ ಕೆಳ ಭಾಗದಲ್ಲಿರುವ ಜನರ ಸುರಕ್ಷತೆ ಬಗ್ಗೆ ಮುಂಜಾಗ್ರತೆ ವಹಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ನೀರು ಬಂದಾಗ ಬಟ್ಟೆ, ದವಸ - ಧಾನ್ಯ ಎಲ್ಲವೂ ಕೊಚ್ಚಿ ಹೋಗಿದೆ. ಬೆಳೆದಿದ್ದ ಬೆಳೆಯಲ್ಲ ನಾಶವಾಗಿದೆ. ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. 2019 ನೆರೆ ವೇಳೆಯೂ ಮನೆ, ಬೆಳೆ ನಾಶವಾದವರಿಗೆ ಪರಿಹಾರ ನೀಡಿಲ್ಲ. ಈಗಾಗಲೇ ಈ ಭಾಗದ ಸಂತ್ರಸ್ತರಿಂದ ಮಾಹಿತಿ ಪಡೆದಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಓದಿ: ಸಚಿವರ ಪಟ್ಟಿಗೆ ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ರೆ ಬುಧವಾರ ಸಂಪುಟ ರಚನೆ: ಸಿಎಂ ಬೊಮ್ಮಾಯಿ
ಕಳೆದ ಭಾರಿ ಪ್ರವಾಹ ಬಂದಾಗ ಎರಡೆರಡು ಭಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈ ಬಾರಿಯೂ ಅದೆ ರೀತಿಯ ಪ್ರವಾಹ ಬಂದಿದೆ. ಈ ಬಾರಿ ಮತ್ತೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಾಯ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಿಂದ ಎಷ್ಟು ಪರಿಹಾರ ಕೊಡಿಸಲು ಸಾಧ್ಯವಾಗುತ್ತೊ ಅಷ್ಟನ್ನು ಕೊಡಿಸಲಾಗುವುದು. ನಮ್ಮ ಸರ್ಕಾರ ಇದ್ದಿದ್ದರೆ ಜನರಿಗೆ ಶಾಶ್ವತ ಪರಿಹಾರ ಒದಗಿಸುತ್ತಿದ್ದೆವು. ಕೆಪಿಸಿಎಲ್ ಜೊತೆ ಮಾತನಾಡಿದ್ದು, ಮನೆ ಹಾಗೂ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.