ಕಾರವಾರ (ಉತ್ತರ ಕನ್ನಡ) : ಪ್ರತಿ ಜಿಲ್ಲೆಯಲ್ಲಿ ಯಾವುದೋ ಒಂದು ಸ್ಥಳ, ಹೋಟೆಲ್ ಮತ್ತು ತಿನಿಸು ಗ್ರಾಹಕರಿಗೆ ಅಚ್ಚುಮೆಚ್ಚು ಆಗಿರುತ್ತದೆ. ಅದಕ್ಕೆ ಸುದೀರ್ಘ ಇತಿಹಾಸವೇ ಇರುತ್ತದೆ. ಹಾಗೆಯೇ ಜಿಲ್ಲೆಯಲ್ಲಿ ಸಣ್ಣ ಹೋಟೆಲ್ವೊಂದರ ತಿನಿಸು ಪದಾರ್ಥ ತನ್ನ ವಿಶಿಷ್ಟ ರುಚಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.
ಇಲ್ಲಿನ ಹಲ್ವಾ ಪಾವ್ ಸವಿಯಲು ಕಾದು ಕೂರುವ ಗ್ರಾಹಕರು: ಹೌದು, ಅದು ಮೂರ್ನಾಲ್ಕು ಟೇಬಲ್ ಒಳಗೊಂಡಿರುವ ಸಣ್ಣ ಹೋಟೆಲ್. ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿರುವ ಈ ಹೋಟೆಲ್‌ನಲ್ಲಿ ತಯಾರಾಗುವ ಹಲ್ವಾ ಪಾವ್ ಹಲವು ದಶಕಗಳಿಂದ ತನ್ನ ಸ್ವಾದವನ್ನು ಕಾಯ್ದುಕೊಂಡಿದೆ. ಗಡಿಯನ್ನು ಮೀರಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಉತ್ತರ ಕಾರವಾರದ ನಂದನ ಗದ್ದಾದಲ್ಲಿರುವ ಈ ಹೋಟೆಲ್ ಹೆಸರು ಶ್ರೀ ಗಣಪತಿ. 80 ವರ್ಷಗಳಷ್ಟು ಹಳೆಯದಾದ ಈ ಹೋಟೆಲ್‌ನಲ್ಲಿ ಸಂಜೆ 4 ಗಂಟೆ ನಂತರ ತಯಾರಾಗೋ ಹಲ್ವಾ ಪಾವ್ ರುಚಿ ಸವಿಯುವುದಕ್ಕೋಸ್ಕರವೇ ಜನರು ಕಾದು ಕೂರುತ್ತಾರೆ.
ಕಾರವಾರದ ನಂದನ ಗದ್ದಾದ ದತ್ತಾ ಬಾಡಕರ್ ಎನ್ನುವರು 1940ರ ಸಮಯದಲ್ಲಿ ಆರಂಭಿಸಿದ ಈ ಹೋಟೆಲ್ ಅನ್ನು ಅವರ ಮಗ ಸುನೀಲ್ ಬಾಡಕರ್ ನಡೆಸಿಕೊಂಡು ಬಂದಿದ್ದರು. ಇದೀಗ ಮೂರನೇ ಪೀಳಿಗೆಯ ದರ್ಶನ್ ಬಾಡಕರ್ ತಂದೆಯೊಂದಿಗೆ ಕೈಜೋಡಿಸಿ ಹೋಟೆಲ್ ಉದ್ಯಮವನ್ನು ಮುಂದುವರೆಸುತ್ತಿದ್ದಾರೆ.
ಮೂರು ತಲೆಮಾರಿನ ಈ ಹೋಟೆಲ್‌ನ ಹಲ್ವಾ ಪಾವ್ ಭಾರತದ ಸ್ವಾತಂತ್ರ್ಯ ಪೂರ್ವದಿಂದಲೂ ಈ ಭಾಗದಲ್ಲಿ ಫೇಮಸ್ ಆಗಿದ್ದು, ಇಂದಿಗೂ ಅದೇ ರುಚಿ, ಅದೇ ಪ್ರಖ್ಯಾತಿಯನ್ನು ಉಳಿಸಿಕೊಂಡು ಬಂದಿದೆ. ದತ್ತಾ ಹೋಟೆಲ್, ದತ್ತು ಮಾಮ್ ಹೋಟೆಲ್, ಹಲ್ವಾ ಪಾವ್ ಹೋಟೆಲ್ ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಂಡಿರುವ ಈ ಹೋಟೆಲ್‌ನ ಅಸಲಿ ಹೆಸರು 'ಹೋಟೆಲ್ ಶ್ರೀ ಗಣಪತಿ' ಎಂದು. ನೀವು ಗೂಗಲ್ ಮ್ಯಾಪ್‌ನಲ್ಲಿ ತಡಕಾಡಿದರೆ ನೇರವಾಗಿ ಹೋಟೆಲ್‌ನ ಎದುರಿಗೆ ತಂದು ನಿಲ್ಲಿಸುತ್ತದೆ.
ಗೋವಾ, ಮಹಾರಾಷ್ಟ್ರ ಗ್ರಾಹಕರಿಗೂ ಅಚ್ಚುಮೆಚ್ಚು: ಈ ಹಲ್ವಾ ಪಾವ್ ಗಡಿಭಾಗವಾದ ಕಾರವಾರದವರಿಗೆ ಅಷ್ಟೇ ಅಲ್ಲದೆ, ಗೋವಾ, ಮಹಾರಾಷ್ಟ್ರದವರಿಗೂ ತುಂಬಾ ರುಚಿಸಿದೆ. ಕಾರವಾರಕ್ಕೆ ಆಗಮಿಸಿದವರು ಇಲ್ಲಿನ ಹೋಟೆಲ್ಗೆ ಬಂದು ಹಲ್ವಾ ಪಾವ್‌ನ ರುಚಿ ನೋಡದೆ ತೆರಳೋದಿಲ್ಲ ಎನ್ನುತ್ತಾರೆ ಹೊಟೇಲ್ ಮಾಲೀಕರಾದ ಸುನೀಲ್ ಬಾಡಕರ್.
ಇದನ್ನೂ ಓದಿ : ಸವಣೂರಿನ ವೀಳ್ಯದೆಲೆಗೆ ಪಾಕಿಸ್ತಾನದಲ್ಲೂ ಬೇಡಿಕೆ; ರೈತರಿಗೆ ಕೈತುಂಬಾ ಆದಾಯ
ಇಷ್ಟೊಂದು ಫೇಮಸ್ ಆಗಿರುವ ಹಲ್ವಾ ಪಾವ್ ಹೋಟೆಲ್ ಬೆಳಗ್ಗೆಯಿಂದಲೇ ತೆರೆದುಕೊಂಡಿದ್ದರು ಕೂಡ ಹಲ್ವಾ ಪಾವ್ ಸಿಗುವುದು ಮಾತ್ರ ಸಂಜೆ 4 ಗಂಟೆ ಬಳಿಕವೇ. ಅದರಲ್ಲಿಯೂ ಭಾನುವಾರ ದಿನ ರಜೆ ಇರುತ್ತದೆ. ಉಳಿದಂತೆ ಎಲ್ಲಾ ದಿನವೂ 4 ಗಂಟೆ ಬಳಿಕ ದೊರೆಯುತ್ತದೆ.