ಶಿರಸಿ(ಉತ್ತರ ಕನ್ನಡ): ಕೇಂದ್ರ ಸರ್ಕಾರದ ನಿಯಮಾವಳಿಯಂತೆ ತಾಲೂಕಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಭಟ್ಕಳ ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ ಎಂದರು.
ಭಟ್ಕಳದಲ್ಲಿನ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಜಿಲ್ಲೆಯ ಉಳಿದೆಡೆಗೆ ಅನ್ವಯವಾಗುವಂತೆ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಗ್ರಾಮಾಂತರ ಮತ್ತು ನಗರದ ಯಾವುದೇ ಅಂಗಡಿಗಳು ತೆರೆಯುವಂತಿಲ್ಲ. ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಅವಕಾಶ ನೀಡಲಾಗಿದೆ ಎಂದರು.
ಮೇ 4ರಿಂದ ಮೇ 17ರವರೆಗೆ ಈ ಎಲ್ಲಾ ನಿಯಮಗಳು ಜಾರಿಯಲ್ಲಿರುತ್ತವೆ. ಆಟೋ ರಿಕ್ಷಾಗಳಲ್ಲಿ ಒಬ್ಬ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದು, ಕ್ಷೌರದಂಗಡಿ, ಬ್ಯೂಟಿ ಪಾರ್ಲರ್, ಐಸ್ ಕ್ರೀಮ್ ಪಾರ್ಲರ್ಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋವಾದಿಂದ ಜಿಲ್ಲೆಗೆ ಆಗಮಿಸಲು ಕಾಯುತ್ತಿರುವ 10,000ಕ್ಕೂ ಹೆಚ್ಚು ಜನರಿಗೆ ಸಿಹಿ ಸುದ್ದಿ ನೀಡಿದ್ದು, ಮಂಗಳವಾರ ಮಧ್ಯಾಹ್ನದೊಳಗೆ ಗೋವಾದಿಂದ ಜಿಲ್ಲೆಗೆ ಬರಲು ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ ಎಂದರು.
ಅಲ್ಲದೆ ಮಂಗಳವಾರದಿಂದ ಮರಳು ಸಾಗಾಣಿಗೆಕೆ ಅವಕಾಶ ಕಲ್ಪಿಸಲಾಗಿದ್ದು, ಪೆಟ್ರೋಲ್ ಪಂಪ್ ಮೊದಲಿನಂತೆ 24 ಗಂಟೆ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.