ಕಾರವಾರ: ಜಾತ್ರೆ, ಉತ್ಸವ ಸೇರಿದಂತೆ ಎಲ್ಲೆಂದರಲ್ಲಿ ಹಚ್ಚೆ ಹಾಕುವುದನ್ನು ತಡೆಯಲು ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾಡಳಿತ, ಸಂಬಂಧಪಟ್ಟ ಎಲ್ಲಾ ಇಲಾಖೆ ಹಾಗೂ ಜಾತ್ರಾ ಸಮಿತಿಗಳಿಗೆ ಸುತ್ತೋಲೆ ಹೊರಡಿಸಿ, ಹಚ್ಚೆ ಹಾಕುವುದನ್ನು ತಡೆಯಲು ಸೂಚಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಾತ್ರೆ, ಉತ್ಸವಗಳು ನಡೆಯುತ್ತಿದ್ದು, ಇಲ್ಲಿ ಹಚ್ಚೆ ಹಾಕುವವರ ಹಾಗೂ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಹಚ್ಚೆ ಹಾಕುವಾಗ ಸೂಜಿಗಳನ್ನು ಬದಲಾಯಿಸದೇ, ಸಂಸ್ಕರಣೆ ಮಾಡದೆ, ಒಬ್ಬರಾದ ಮೇಲೆ ಇನ್ನೊಬ್ಬರಿಗೆ ಹಚ್ಚೆ ಹಾಕಿಸಿಕೊಳ್ಳುವುದರಿಂದ ಹೆಚ್ಐವಿ ಸೋಂಕು ತಗಲುವ ಸಾಧ್ಯತೆಗಳಿವೆ. ಹಾಗಾಗಿ ಜಿಲ್ಲೆಯಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಹಾಗೂ ಇತರೆ ಯಾವುದೇ ಸ್ಥಳದಲ್ಲಿ ಹಚ್ಚೆ ಹಾಕುವುದಕ್ಕೆ ಅವಕಾಶ ನೀಡದಂತೆ ಕೆಎಸ್ಎಪಿಎಸ್ ಯೋಜನಾ ನಿರ್ದೇಶಕರ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಜಾತ್ರೆ ಉತ್ಸವಗಳಲ್ಲಿ ಹಚ್ಚೆ ಹಾಕುವವರು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜಾತ್ರೆ ಉತ್ಸವ ಉಸ್ತುವಾರಿ ಸಮಿತಿಗಳಿಗೆ ಇದರ ಗಂಭೀರತೆಯನ್ನು ಮನವರಿಕೆ ಮಾಡಿ, ಹಚ್ಚೆ ಹಾಕುವುದನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಆಯಾ ವ್ಯಾಪ್ತಿಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.