ಕಾರವಾರ: ಮುಖ್ಯಮಂತ್ರಿಗಳು ನಾನು ಕೇಳಿದ ಖಾತೆಯನ್ನೇ ನೀಡಿದ್ದು, ಕಾರ್ಮಿಕ ಸಚಿವನಾಗೇ ಮುಂದುವರಿಯುವುದಾಗಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಖಾತೆ ಹಂಚಿಕೆ ಈಗಾಗಲೇ ಮುಗಿದಿದೆ. ಯಾರಿಗೂ ಕೂಡಾ ಖಾತೆ ಕುರಿತು ಅಸಮಾಧಾನ ಇಲ್ಲ. ಕಾರ್ಯಕರ್ತನಾದವನಿಗೆ ಶಾಸಕನಾಗಬೇಕು, ಶಾಸಕನಾದ ಕೂಡಲೇ ಮಂತ್ರಿಯಾಗಬೇಕು, ಮಂತ್ರಿಯಾದ ಮೇಲೆ ಮುಖ್ಯಮಂತ್ರಿ ಸ್ಥಾನವೇ ಬೇಕು ಹೀಗೆ ಇಂತಹುದೇ ಖಾತೆ ಬೇಕು ಎನ್ನುವ ಬೇಡಿಕೆ ಇರುತ್ತದೆ.
ಆದರೆ, ಪ್ರಭಾವಿಗಳನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅದರ ಕಷ್ಟ ಗೊತ್ತಿದೆ. ಮುಖ್ಯಮಂತ್ರಿಗಳು ಯಾವ ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಸರ್ಕಾರಕ್ಕೆ, ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಮಾಡಬೇಕು ಎಂದರು.
ಅತೃಪ್ತರೊಂದಿಗೆ ರಮೇಶ್ ಜಾರಕಿಹೊಳಿ ಮೀಟಿಂಗ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ ಹೆಬ್ಬಾರ್, ರಮೇಶ್ ಜಾರಕಿಹೊಳಿ ಈಗಲೂ ನನ್ನ ಸ್ನೇಹಿತ ಎಂದರು.
ಇದನ್ನೂ ಓದಿ: ಸಚಿವರ ಸಭೆಗೆ ಆಗಮಿಸುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ!