ಶಿರಸಿ: ಹಾಸನದ ಅರಸಿಕೇರಿ ಶಾಸಕ ಶಿವಲಿಂಗೇಗೌಡ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಉಲ್ಲೇಖಿಸಿದ್ದು, ಈ ಮೂಲಕ ತಾವು ಕಾಂಗ್ರೆಸ್ಗೆ ಹೋಗುವ ಬಗ್ಗೆ ಮತ್ತಷ್ಟು ಖಚಿತಪಡಿಸಿದರು.
ಅರಸಿಕೇರಿಯಿಂದ ಅಂದಾಜು 300 ಕ್ಕೂ ಅಧಿಕ ಬೆಂಬಲಿಗರೊಂದಿಗೆ ಶಿರಸಿಯ ವಿಧಾನಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದರು. ಇದರಿಂದಾಗಿ ಎ.ಟಿ. ರಾಮಸ್ವಾಮಿ ನಂತರ ಜೆಡಿಎಸ್ನ ಎರಡನೇ ವಿಕೆಟ್ ಪತನವಾಗಿದೆ.
ಜೆಡಿಎಸ್ ನಾಯಕರಲ್ಲಿನ ಭಿನ್ನಾಪ್ರಾಯದಿಂದ ಪಕ್ಷ ಬಿಡುತ್ತಿದ್ದೇನೆ- ಶಿವಲಿಂಗೇಗೌಡ.. 3 ಬಾರಿ ಜೆಡಿಎಸ್ನಿಂದ ಶಾಸಕರಾದ ಶಿವಲಿಂಗೇಗೌಡ ರಾಜೀನಾಮೆ ನೀಡುವ ಸಂದರ್ಭದಲ್ಲಿಯೂ ಶಕ್ತಿ ಪ್ರದರ್ಶನ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿನ ನಾಯಕರ ಭಿನ್ನಾಭಿಪ್ರಾಯದಿಂದ ಪಕ್ಷ ಬಿಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಟಿಕೆಟ್ ಸಹ ಖಚಿತ ಆಗಿದೆ ಎಂದರು.
'ನನ್ನೊಂದಿಗೆ ಕಾರ್ಯಕರ್ತರಿದ್ದಾರೆ': ಜೆಡಿಎಸ್ ಭವಿಷ್ಯದ ಬಗ್ಗೆ ನಾನೇನು ಮಾತನಾಡಲ್ಲ. ಆದರೆ ನನ್ನೊಂದಿಗೆ ಕಾರ್ಯಕರ್ತರು ಇದ್ದಾರೆ. ಅದು ಇವತ್ತೇ ಎಲ್ಲರಿಗೂ ತಿಳಿದಂತಾಗಿದೆ. ಇದೇ ಕಾರಣಕ್ಕಾಗಿ ಟಿಕೆಟ್ ಕನ್ಫರ್ಮ್ ಮಾಡಿಕೊಂಡೇ ರಾಜೀನಾಮೆ ನೀಡಿದ್ದೇನೆ. ಇಲ್ಲಿ ಗೆಲುವು ಸೋಲು ಮುಖ್ಯವಲ್ಲ. ಭಿನ್ನಾಭಿಪ್ರಾಯದಿಂದ ಹೊರಬಂದಿದ್ದೇನೆ. ಅದೇ ಕಾರಣದಿಂದ ಬೆಂಗಳೂರಿನಲ್ಲಿ ಸ್ಪೀಕರ್ ಸಿಗದ ಕಾರಣ ಅರಿಸಿಕೇರಿಯಿಂದ ಶಿರಸಿಗೆ ಬಂದು ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಧ್ಯಮದವರಿಗೆ ಶಿವಲಿಂಗೇಗೌಡ ಹೇಳಿದರು. ಹಾಸನ ಜಿಪಂ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಪ್ರಮುಖರು ಶಿವಲಿಂಗೇಗೌಡರಿಗೆ ಸಾಥ್ ನೀಡಿದರು.
ಇದನ್ನೂ ಓದಿ: ಹಿರಿಯ ರಂಗ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಕಾರು ಅಪಘಾತದಲ್ಲಿ ನಿಧನ
ಕೆ ಎಂ ಶಿವಲಿಂಗೇಗೌಡ ಅವರು ಕೆಲ ದಿನಗಳ ಹಿಂದೆ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ ಎಂದು ಸಭೆಯೊಂದರಲ್ಲಿ ತಮ್ಮ ಹೇಳಿಕೆ ಕೊಟ್ಟಿದ್ದರು. ಜೆಡಿಎಸ್ ಪಕ್ಷ ಮತ್ತು ದೇವೇಗೌಡರ ಕುಟುಂಬ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾದ ಬಳಿಕ ಪಂಚರತ್ನ ರಥಯಾತ್ರೆ ಬಹಿರಂಗ ಸಭೆಯೊಂದರಲ್ಲಿ ಹೆಚ್ಡಿಕೆ ಮತ್ತು ಹೆಚ್ಡಿಆರ್ ಸಹೋದರರು ಶಿವಲಿಂಗೇಗೌಡ ಅವರಿಗೆ ಸವಾಲೆಸೆದಿದ್ದರು. ಇದೀಗ ಶಿವಲಿಂಗೇಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚಮಹಾರಥೋತ್ಸವ ವೈಭವ- ವಿಡಿಯೋ
ಇತ್ತೀಚೆಗೆ ಅರಸೀಕೆರೆಯ ಗುತ್ತಿನಗೆರೆ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಗುಣಗಾನ ಮಾಡಿದ್ದರು. ಅರಸೀಕೆರೆ ತಾಲೂಕಿನ ಇತಿಹಾಸಕ್ಕೆ ಸಿದ್ದರಾಮಯ್ಯ ಅವರು ಭದ್ರ ಬುನಾದಿ ಹಾಕಿದ್ದಾರೆ. ಎಚ್ ಕೆ ಪಾಟೀಲ್ ಯೋಜನೆಯನ್ನು ಶತಾಯುಗತಾಯ ಆಗೋದಿಲ್ಲ ಅಂತ ಹೇಳಿದ್ರು. ಸಿದ್ದರಾಮಯ್ಯ ಅವತ್ತು ನೀರಾವರಿ ಯೋಜನೆಯನ್ನು ನಮ್ಮ ತಾಲೂಕಿಗೆ ಕೊಟ್ರು. ತಾಲೂಕಿಗೆ ಅವರ ಕೊಡುಗೆ ಅಪಾರ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರೂ ಕೂಡ ಅರಸೀಕೆರೆಯಿಂದ ಶಿವಲಿಂಗೇಗೌಡ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರೆ ಎಂದು ಹೇಳಿದ್ದರು.