ಶಿರಸಿ (ಉತ್ತರಕನ್ನಡ): ಪ್ರತೀ ವರ್ಷ ಮಳೆಗಾಲದಲ್ಲಿ ಬೆಳ್ಳಕ್ಕಿಗಳ ಗುಂಪು ಇಲ್ಲಿಗೆ ಬಂದು ತಮ್ಮ ಸಂತಾನಾಭಿವೃದ್ಧಿ ಮಾಡಿಕೊಂಡು ಹೋಗುವ ಪರಿಪಾಠ ನೂರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ, ಸಹ್ಯಾದ್ರಿಯ ಮಡಿಲಲ್ಲಿ ಮಳೆಗಾಲದಲ್ಲಿ ಮುಂಡಿಗೆ ಗಿಡಗಳ ನಡುವಲ್ಲಿ ಪಕ್ಷಿಗಳು ಗೂಡು ಕಟ್ಟುವ ಏಕೈಕ ಸ್ಥಳ ಇದಾಗಿದೆ.
ಸುಮಾರು 6 ಪ್ರಬೇಧದ ಹಕ್ಕಿಗಳು ಇಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತಿದ್ದು, 1980 ರ ವೇಳೆಯಲ್ಲಿ ಕರ್ನಾಟಕದ ಖ್ಯಾತ ಪಕ್ಷಿತಜ್ಞ ಪಿ.ಡಿ ಸುದರ್ಶನ್ ಅಜ್ಞಾತವಾಗಿದ್ದ ಈ ಪಕ್ಷಿಧಾಮವನ್ನು ಹೊರ ಜಗತ್ತಿಗೆ ಪರಿಚಯಿಸಿದರು. 1995 ರಿಂದ ಜಾಗೃತ ವೇದಿಕೆ ಸೋಂದಾ (ರಿ.) ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀ ಶ್ರೀಗಳವರ ಮಾರ್ಗದರ್ಶನದಲ್ಲಿ ಇದರ ಸಂರಕ್ಷಣೆ ಮಾಡುತ್ತ ಬಂದಿದೆ.
2019-20 ರಲ್ಲಿ ಗ್ರಾಮ ಪಂಚಾಯಿತಿ ಸೋಂದಾ ಇವರು ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸಲಹೆಯಂತೆ ಮುಂಡಿಗೇಕೆರೆ ಪಕ್ಷಿಧಾಮವನ್ನು “ಪಾರಂಪರಿಕ ಜೀವ ವೈವಿಧ್ಯ ತಾಣ” ಎಂದು ಅಧಿಕೃತವಾಗಿ ಘೋಷಿಸಿ ರಕ್ಷಣಾ ಕವಚ ತೋಡಿಸಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಹೆರಿಗೆಗೆ ಬಂದ ಪಕ್ಷಿಗಳಿಗೆ ಅರಣ್ಯ ಇಲಾಖೆಯು 2003 ರಿಂದ ಕಾವಲುಗಾರರನ್ನು ನಿಯಮಿಸಿ ರಕ್ಷಿಸುತ್ತಾ ಬಂದಿದೆ. ಪಾರಂಪರಿಕ ಜೀವವೈವಿಧ್ಯ ತಾಣ ಮುಂಡಿಗೇಕೆರೆಗೆ ನಿರ್ದಿಷ್ಟ ಸಮಯದಲ್ಲಿ ತಮ್ಮ ಸಂತಾನಾಭಿವೃದ್ಧಿಗಾಗಿ ಬರುವ ಬೆಳ್ಳಕ್ಕಿಗಳಿಗೆ ರಕ್ಷಣೆ ನೀಡುವುದು ಅತ್ಯಗತ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತುರ್ತಾಗಿ ಕ್ರಮ ಕೈಗೊಂಡು ಕಾವಲುಗಾರರನ್ನು ನೇಮಿಸಿ ಪಕ್ಷಿಗಳಿಗೆ ರಕ್ಷಣೆ ನೀಡುವಂತಾಗಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಒಟ್ಟಾರೆಯಾಗಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪಿರುವ ಇಂದಿನ ಸಂದರ್ಭದಲ್ಲಿ ಇಂತಹಾ ಕೆರೆಗಳನ್ನ ರಕ್ಷಿಸಿ ಉಳಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಈ ಕೆರೆ ಸುತ್ತ ಮುತ್ತ ಸಹಸ್ರಲಿಂಗ, ಸೋದೆ ವಾದಿರಾಜ ಮಠ, ಸ್ವಾದಿ ಜೈನ ಮಠ ಸೇರಿ ಹಲವು ಧಾರ್ಮಿಕ ಕೇಂದ್ರಗಳೂ, ಜಲಪಾತಗಳೂ ಇದ್ದು, ಪ್ರವಾಸಿಗರಿಗೆ ಮುಂಡಿಗೆ ಕೆರೆಯೂ ಸಹ ವಿಶೇಷ ಸ್ಥಳವಾಗಿದೆ.