ಶಿರಸಿ (ಉತ್ತರ ಕನ್ನಡ): ಜಿಲ್ಲೆಯ ಮಲೆನಾಡು ಪ್ರದೇಶದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ಹೈಟೆಕ್ ಆಸ್ಪತ್ರೆಯ ಕನಸು ಶಿರಸಿಯಲ್ಲಿ ನನಸಾಗಲಿದ್ದು, ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಬಿಎಸ್ವೈ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಡಗಿದೆ.
ಸುಮಾರು 170 ಕೋಟಿ ರೂಪಾಯಿ ಅನುದಾನದಲ್ಲಿ ನೂತನ ತಂತ್ರಜ್ಞಾನದೊಂದಿಗೆ ಆಸ್ಪತ್ರೆಯನ್ನು 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ತಿರ್ಮಾನಿಸಲಾಗಿದೆ. ಈಗಿರುವ ಆಸ್ಪತ್ರೆಯಲ್ಲಿ 100 ಹಾಸಿಗೆಗಳಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದಿಂದ ಜಿಲ್ಲಾ ಆಸ್ಪತ್ರೆಯ ದರ್ಜೆಗೆ ಏರಿಕೆಯಾಗಲಿದೆ.
ಕಟ್ಟಡ ನಿರ್ಮಾಣಕ್ಕೆ 112 ಕೋಟಿ ರೂ., ಇಕ್ವಿಪ್ಮೆಂಟ್ ಮತ್ತು ಮಶಿನರೀಸ್ ಖರೀದಿಗೆ 30 ಕೋಟಿ ರೂ., ಹೆಚ್ಚುವರಿ ಮಾನವ ಸಂಪನ್ಮೂಲಕ್ಕೆ 5.84 ಕೋಟಿ ರೂ., ಔಷಧ ಮತ್ತು ಇತರ ಖರ್ಚಿಗೆ 50 ಲಕ್ಷ ರೂ, ಹೆಚ್ಚುವರಿ ಜನರೇಟರ್ಸ್ ಮತ್ತು ವಾಹನ ಖರೀದಿಗೆ 21 ಲಕ್ಷ, ಹೆಚ್ಚುವರಿ ಯಂತ್ರಗಳು, ಉಪಕರಣಗಳು ಮತ್ತು ಇತರ ಖರ್ಚಿಗಾಗಿ 26.08 ಕೋಟಿ ರೂ. ಸೇರಿ ಒಟ್ಟು 174.63 ಕೋಟಿ ರೂ. ಮೀಸಲು ಇಡಲಾಗಿದೆ.