ಶಿರಸಿ: ಉತ್ತರ ಕನ್ನಡ ಜಿಲ್ಲೆ ವಿಭಜಿಸಿ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ಒತ್ತಾಯಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು. 50ಕ್ಕೂ ಅಧಿಕ ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡು ಶಿರಸಿ ಜಿಲ್ಲೆಗಾಗಿ ಆಗ್ರಹಿಸಿದವು.
ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಶಿರಸಿ ನಗರ ಬೆಳಗ್ಗೆಯಿಂದಲೇ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು. ಬಸ್ ಸಂಚಾರ ಕೂಡ 10 ಗಂಟೆಯಿಂದ ಬಂದ್ ಆಗಿತ್ತು.
ಶಿರಸಿ ಈಗಾಗಲೇ ಶೈಕ್ಷಣಿಕ ಜಿಲ್ಲೆ ಆಗಿದೆ. ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಇಲಾಖೆ ಹೊರತುಪಡಿಸಿ ಜಿಲ್ಲಾ ಹಂತದ ಎಲ್ಲಾ ಕಚೇರಿಗಳೂ ಕೂಡ ಈಗಾಗಲೇ ಶಿರಸಿಯಲ್ಲಿವೆ. ಹೀಗಾಗಿ ಪ್ರತ್ಯೇಕ ಜಿಲ್ಲೆ ಮಾಡಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆ ಬರೋಬ್ಬರಿ 12 ತಾಲೂಕುಗಳನ್ನು ಹೊಂದಿದ್ದು, ಸುಮಾರು 11,000 ಚ.ಕಿಮೀ ವಿಸ್ತೀರ್ಣ ಇದೆ. ಆದ್ದರಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಮುಂಡಗೋಡು ಸೇರಿಸಿ ಕನ್ನಡದ ಪ್ರಪ್ರಥಮ ರಾಜಧಾನಿಯಾಗಿದ್ದ ಬನವಾಸಿಯನ್ನು ತಾಲೂಕಾಗಿ ಮಾಡಿ, ಶಿರಸಿಯನ್ನು ಪ್ರತ್ಯೇಕ ನೂತನ ಜಿಲ್ಲೆಯಾಗಿ ರಚಿಸಬೇಕು ಎಂದು ಒತ್ತಾಯಿಸಿದರು.