ಕಾರವಾರ: ಐಎನ್ಎಸ್ ಸುಮೇಧಾ ಹಡಗಿನಲ್ಲಿದ್ದ ಭಾರತೀಯ ನೌಕಾ ಸಿಬ್ಬಂದಿಯೋರ್ವರು ಮೃತಪಟ್ಟಿರುವ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದ್ದು, ಇಂದು ಪಾರ್ಥಿವ ಶರೀರವನ್ನು ಸೀಬರ್ಡ್ ನೌಕಾನೆಲೆ ಮೂಲಕ ಕಾರವಾರಕ್ಕೆ ತರಲಾಗಿದೆ.
ಹರಿಯಾಣ ಮೂಲದ ಗೌರವ್ ದತ್ ಶರ್ಮಾ ಮೃತಪಟ್ಟವರು. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನೌಕಾನೆಲೆಗೆ ಸೇರಿದ ಐಎನ್ಎಸ್ ಸುಮೇಧಾ ಹಡಗಿನಲ್ಲಿ ಎಂಜಿನ್ ರೂಮ್ ಆರ್ಟಿಫೈರ್ (ಇಆರ್ಎ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಡಗಿನ ಪ್ಲೈ ವೀಲ್ ತುಂಡೊಂದು ದೇಹಕ್ಕೆ ಹೊಕ್ಕಿದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಹಡಗಿನಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹಡಗನ್ನು ಕಾರವಾರದ ಸೀಬರ್ಡ್ ನೌಕಾನೆಲೆಗೆ ತಂದು ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ.
ಮೇ 25 ರಂದು ವಿಮಾನದ ಮೂಲಕ ಸ್ವಗೃಹಕ್ಕೆ ರವಾನೆ ಮಾಡಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಘಟನೆ ಸಂಬಂಧ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಎಂದು ನೌಕಾನೆಲೆ ಅಧಿಕಾರಿಗಳು ತಿಳಿಸಿದ್ದಾರೆ.