ಕಾರವಾರ: ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳ ಬೀಚ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ.
ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ : ಡಿ. 31ರ ಸಂಜೆ 4 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಅವರ ಆದೇಶದಂತೆ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ವ್ಯಾಪ್ತಿಯ ಬೀಚ್, ಐತಿಹಾಸಿಕ ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡುವ ಸಾಧ್ಯತೆ ಇರುವುದರಿಂದ ಕೋವಿಡ್ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ 5 ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಯಾವುದೇ ತೆರೆದ ಸ್ಥಳ, ಪಾರ್ಕ್ ಹಾಗೂ ಇತರ ಮೈದಾನಗಳಲ್ಲಿ ಹಮ್ಮಿಕೊಳ್ಳುವುದು ಮತ್ತು ಕೇಕ್ ಕತ್ತರಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಓದಿ : ತುಮಕೂರು: ಪ್ರಾಥಮಿಕ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಕೊರೊನಾ... ವರದಿ ಬಳಿಕ 'ರೂಪಾಂತರ' ರಹಸ್ಯ ಬಯಲು
ಹೊಸ ವರ್ಷಾಚರಣೆ ವೇಳೆ ಜನರು ಗುಂಪುಗೂಡುವುದರಿಂದ ಮತ್ತೆ ಕೊವಿಡ್ ಹರಡುವ ಸಾಧ್ಯತೆ ಇದೆ, ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಮನೆಯಲ್ಲಿ ಇಲ್ಲವೇ ಹೋಟೆಲ್ ಇನ್ನಿತರ ಖಾಸಗಿ ಸ್ಥಳಗಳಲ್ಲಿ ಗುಂಪುಗೂಡದೇ ಸಂಭ್ರಮಿಸಲು ಅಭ್ಯಂತರವಿಲ್ಲ. ಹೋಟೆಲ್, ಬಾರ್ ಸೇರಿದಂತೆ ಇತರ ವಾಣಿಜ್ಯ ಸ್ಥಳಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿದೆ. ಆದರೆ, ಹೊಸ ವರ್ಷದ ನಿಮಿತ್ತ ಯಾವುದೇ ವಿಶೇಷ ಕಾರ್ಯಕ್ರಮ ನಿಯೋಜಿಸುವಂತಿಲ್ಲ. ಈಗಾಗಲೇ ಜಿಲ್ಲೆಗೆ ಆಗಮಿಸಿದ ಮತ್ತು ಆಗಮಿಸಲಿರುವ ಪ್ರವಾಸಿಗರು ಯಾವುದೇ ಕಾರಣಕ್ಕೂ ಸಾರ್ವಜನಿಕ ಪ್ರದೇಶದಲ್ಲಿ ಹೊಸ ವರ್ಷಾಚರಣೆ ನಡೆಸಬಾರದು. ನಿಯಮ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.