ಕಾರವಾರ (ಉತ್ತರಕನ್ನಡ) : ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಹೊರರಾಜ್ಯದ ಮೀನುಗಾರರನ್ನು ನಂಬಿದ್ದ ಬೋಟ್‌ಗಳಿಗೆ ಎರಡು ವಾರ ಕಳೆದರೂ ಕಾರ್ಮಿಕರು ಬಾರದೇ ಇರುವುದು ಬೋಟ್‌ಗಳು ಬಂದರುಗಳಲ್ಲಿಯೇ ಲಂಗರು ಹಾಕಿವೆ.
ಜಿಲ್ಲೆಯ ಬಹುತೇಕ ಮೀನುಗಾರಿಕಾ ಬೋಟುಗಳು ಒಡಿಶಾ, ಜಾರ್ಖಂಡ್, ಉತ್ತರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯದ ಕಾರ್ಮಿಕರನ್ನೇ ಹೆಚ್ಚಾಗಿ ನಂಬಿಕೊಂಡಿವೆ. ಈ ಕಾರ್ಮಿಕರ ಮೂಲಕವೇ ವರ್ಷವಿಡೀ ಮೀನುಗಾರಿಕೆ ನಡೆಯುತ್ತದೆ. ಆದರೆ ಈಗ ಮೀನುಗಾರಿಕೆ ಪ್ರಾರಂಭವಾಗಿ ಎರಡು ವಾರ ಸಮೀಪಿಸಿದರೂ ಕಾರ್ಮಿಕರು ಆಗಮಿಸಿಲ್ಲ. ಬೋಟ್ ಮಾಲೀಕರು ಕಾರ್ಮಿಕರನ್ನು ಫೋನ್ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಲಭಿಸದೇ ಇರುವುದು ಬೋಟ್‌ಗಳು ಲಂಗರು ಹಾಕಲು ಕಾರಣವಾಗಿದೆ.
ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವ ತಲಾ ಒಂದು ಬೋಟುಗಳಿಗೆ ಸುಮಾರು 30ರಿಂದ 35 ಕಾರ್ಮಿಕರ ಅಗತ್ಯವಿದೆ. ಈ ಪರ್ಸಿನ್ ಬೋಟುಗಳು ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದರೆ ವಾಪಸಾಗಲು 5 ದಿನಗಳು ಬೇಕು. ಈ ಬೋಟುಗಳಿಗೆ ಹೆಚ್ಚಿನ ಕಾರ್ಮಿಕರು ಬೇಕು. ಟ್ರಾಲರ್ ಬೋಟುಗಳು ನಿತ್ಯ ಮೀನುಗಾರಿಕೆ ಮಾಡುವ ಬೋಟ್ಗಳಾಗಿದ್ದು 10 ಕಾರ್ಮಿಕರಿದ್ದರೆ ಸಾಕು. ಕಾರ್ಮಿಕರೆಲ್ಲ ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯದವರಾಗಿದ್ದು ಈವರೆಗೆ ಶೇ.10ರಷ್ಟು ಕಾರ್ಮಿಕರು ಮರಳದೇ ಇರುವುದು ಜಿಲ್ಲೆಯ ಅನೇಕ ಬೋಟುಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದೆ.
"ಜಾರ್ಖಂಡ್ ಸೇರಿದಂತೆ ಆಯಾ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಾಹಿತಿ ಇದೆ. ಹೀಗಾಗಿ ಅಲ್ಲಿನ ಕಾರ್ಮಿಕರು ಬೋಟ್ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ಕೆಲವು ಕಾರ್ಮಿಕರು ಉಡುಪಿ, ಗೋವಾ ಕಡೆ ಕೆಲಸ ಅರಸಿ ತೆರಳುತ್ತಿದ್ದಾರೆ. ಇದರಿಂದ ಮೀನುಗಾರಿಕೆಗೆ ಸಾಕಷ್ಟು ತೊಂದರೆಯಾಗುತ್ತಿದೆ" ಎನ್ನುತ್ತಾರೆ ಬೋಟ್ ಮಾಲೀಕ ನಿತಿನ್ ಗಾಂವಕರ್.
ಪ್ರತಿ ವರ್ಷ ಆಗಸ್ಟ್ 1ರಿಂದ ಮಳೆಗಾಲ ಆರಂಭವಾದರೂ ಭಾರಿ ಮಳೆ, ಗಾಳಿ, ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಸಾಮಾನ್ಯವಾಗಿರುತ್ತಿತ್ತು. ಇದರಿಂದ ಮೀನುಗಾರಿಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಅವಧಿಯಲ್ಲೂ ಮೀನುಗಾರಿಕೆ ಸಾಧ್ಯವಾಗದೇ ನಷ್ಟ ಅನುಭವಿಸುವಂತಾಗುತ್ತಿತ್ತು. ಆದರೆ ಈ ವರ್ಷ ಮಳೆ-ಗಾಳಿಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಮೀನುಗಾರಿಕೆಗೆ ಉತ್ತಮ ವಾತಾವರಣವೂ ಇದೆ.
ಬೋಟ್ ಮಾಲೀಕರ ಆತಂಕ: ಬೈತಕೋಲ್ ಬಂದರು ಒಂದರಲ್ಲೇ 128 ಪರ್ಸಿನ್ ಬೋಟುಗಳು ನೋಂದಣಿಯಾಗಿವೆ. ಅಲ್ಲದೆ ಟ್ರಾಲರ್ ಬೋಟುಗಳೂ ಇವೆ. ಜಿಲ್ಲೆಯ ಬೈತಕೋಲ್, ಅಂಕೋಲಾದ ಬೇಲೇಕೇರಿ, ತದಡಿ, ಭಟ್ಕಳ, ಕಾಸಕೋಡು, ಮುದಗಾ ಮುಂತಾದವುಗಳು ಪ್ರಮುಖ ಮೀನುಗಾರಿಕಾ ಬಂದರುಗಳಾಗಿವೆ.
ಈ ಎಲ್ಲ ಮೀನುಗಾರಿಕಾ ಬಂದರಿನ ಆಳಸಮುದ್ರ ಮೀನುಗಾರಿಕಾ ಬೋಟುಗಳಲ್ಲಿ ದುಡಿಯುವವರು ಹೊರರಾಜ್ಯದ ಕಾರ್ಮಿಕರೇ ಆಗಿದ್ದು ಎಲ್ಲೆಡೆಯೂ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಇದರಿಂದ ಬ್ಯಾಂಕ್‌ಗಳ ಮೂಲಕ ಸಾಲ ಮಾಡಿಕೊಂಡಿರುವ ಅನೇಕ ಮೀನುಗಾರರು ಇಂದು ಸಾಲಕಟ್ಟಲು ಸಾಧ್ಯವಾಗದೆ ತೊಂದರೆಯಲ್ಲಿದ್ದಾರೆ.
"ಕೆಲವು ಕಿಡಿಗೇಡಿಗಳು ಕಾರ್ಮಿಕರು ಬಾರದಂತೆ ತಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ದೂರು ಸಲ್ಲಿಸಲಾಗಿದೆ. ಕಾರ್ಮಿಕರು ಧೈರ್ಯದಿಂದ ಮುಂದೆ ಬರಬೇಕು. ಯಾವುದೇ ಬೆದರಿಕೆಗಳಿಗೆ ಹೆದರುವ ಅವಶ್ಯಕತೆ ಇಲ್ಲ" ಎಂದು ಉತ್ತರಕನ್ನಡ ಜಿಲ್ಲಾ ಸಹಕಾರ ಮೀನುಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : Crab: ಬೆಳಗಾವಿಯಲ್ಲಿ ಏಡಿ ಖರೀದಿಗೆ ಮುಗಿಬಿದ್ದ ಜನರು; ಏಡಿ ಆರೋಗ್ಯಕ್ಕೆ ಒಳ್ಳೆಯದೇ? ನ್ಯೂಟ್ರಿಶಿಯನ್ ಹೇಳುವುದೇನು?