ಭಟ್ಕಳ: ಕೊರೊನಾ ಲಾಕ್ಡೌನ್ನಿಂದಾಗಿ ಏಳು ತಿಂಗಳುಗಳ ಕಾಲ ಸ್ತಬ್ಧವಾಗಿದ್ದ ತಾಲೂಕಿನ ವಾರದ ಸಂತೆ ಭಾನುವಾರದಿಂದ ಪುನರಾರಂಭವಾಯಿತು.
ಮೊದಲ ವಾರದ ಸಂತೆಯ ಪುನರಾರಂಭದ ಕುರಿತು ವ್ಯಾಪಾರಿಗಳು, ಗ್ರಾಹಕರಿಗೆ ಮಾಹಿತಿ ಕೊರತೆಯಿಂದಾಗಿ ಆರಂಭದಲ್ಲಿ ಜನಸಂದಣಿ ಕಾಣಲಿಲ್ಲ. ಆದ್ರೆ ಗಂಟೆಗಳು ಉರುಳಿದಂತೆ ಸಂಜೆಯ ವೇಳೆ ಜನರು ಸಂತೆಯ ಕಡೆ ಮುಖ ಮಾಡಿದ್ದು ಕಂಡುಬಂತು.
ತಾಲೂಕು ಪಂಚಾಯತ್ ಎದುರಿನ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಹಾಗೆಯೇ, ಸಂತೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿಯೇ ಹೋಗುವಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೂಚಿಸಲಾಗಿತ್ತು.
ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಯನ್ನು ಪುರಸಭೆಯ ಸೂಚನೆಯಂತೆ ನಿಗದಿತ ಸ್ಥಳದಲ್ಲಿ ಹಾಕಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಕಂಡು ಬಂತು. ಆದರೆ, ಕೊರೊನಾ ದಾಳಿಗೂ ಪೂರ್ವದ ದಿನದಲ್ಲಿದ್ದ ಅಂಗಡಿಗಳು, ವ್ಯಾಪಾರ ಮತ್ತೆ ಕಳೆಗಟ್ಟಲು ಇನ್ನೂ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಅಂತಾರೆ ಜನರು.