ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ವೃತ್ತದಲ್ಲಿರುವ ಕದಂಬ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಹಸಿರು ವೃದ್ಧಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ಮಾರಾಟ ಮಾಡಲು ಸಸ್ಯ ಸಂತೆ ಆಯೋಜಿಸಲಾಗಿದೆ.
ತೆಂಗು, ಮಾವು, ಏಲಕ್ಕಿ, ಕಾಳುಮೆಣಸು, ರುದ್ರಾಕ್ಷಿ ಗಿಡ, ಬಕ್ಕೆ, ಪತ್ರೆ ಗಿಡಗಳು, ಅಡಿಕೆ ಸಸಿ, ಜಾಯಿಕಾಯಿ, ಹಲಸು, ವಿವಿಧ ಕಾಡು ಜಾತಿಯ ಗಿಡಗಳು ಸೇರಿ 55ಕ್ಕೂ ಅಧಿಕ ತಳಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿವೆ. ಡಿಸಿಎಫ್ ಎಸ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಒಂದು ತಿಂಗಳುಗಳ ಕಾಲ ಸಸ್ಯ ಸಂತೆ ನಡೆಯಲಿದೆ. ರಿಯಾಯಿತಿ ದರದಲ್ಲಿ ರೈತರಿಗೆ ಸಸಿಗಳು ದೊರೆಯಲಿವೆ.
ಕದಂಬ ಮಾರ್ಕೆಟಿಂಗ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮಾತನಾಡಿ, ಕಳೆದ 7 ವರ್ಷದಿಂದ ಸಸ್ಯ ಸಂತೆ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ 1.5 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿದೆ. ಈ ಬಾರಿ 2.5 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ರೈತರು ಬೆಳೆದ ಗಿಡಗಳನ್ನು ತಂದು ಮಾರಾಟ ಮಾಡುವ ಅವಕಾಶವೂ ಇದೆ ಎಂದರು.