ಕಾರವಾರ: ಕರಾವಳಿ ನಗರಿ ಕಾರವಾರದಲ್ಲಿ ವಾಣಿಜ್ಯ ಬಂದರು ವಿಸ್ತರಣೆಯ ಕೇಂದ್ರದ ಸಾಗರಮಾಲಾ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ಅಡ್ಡಿಯಾಗುವುದರ ಜೊತೆಗೆ ಇರುವ ಏಕೈಕ ಕಡಲತೀರಕ್ಕೂ ಹಾನಿಯಾಗುವ ಹಿನ್ನೆಲೆ ಯೋಜನೆ ಕೈಬಿಡುವಂತೆ ನೂರಾರು ಮೀನುಗಾರರು ಪ್ರತಿಭಟಿಸುವ ಮೂಲಕ ಒತ್ತಾಯಿಸಿದ್ದು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ.
ಬಂದರು ಇಲಾಖೆ ಸಾಗರಮಾಲಾ ಕುರಿತು ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಇದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಯೋಜನೆಯಿಂದ ಕಡಲ ತೀರದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕಾಮಗಾರಿಗೆ ಮೀನುಗಾರರು ಅಡ್ಡಿಪಡಿಸಿದ್ದು, ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ.
ರಾಜ್ಯದ ಈ ಸಾಲಿನ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಾಗರಮಾಲಾ ಯೋಜನೆಯಡಿ 1,880 ಕೋಟಿ ಅನುದಾನವನ್ನು 24 ವಿವಿಧ ಯೋಜನೆಗಳು ಸೇರಿದಂತೆ ಕಾರವಾರ ಬಂದರು ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಯೋಜನೆಯಡಿ ಕಾರವಾರ ಬಂದರು ಅಭಿವೃದ್ಧಿಯ ಕುರಿತು ಸರ್ಕಾರ ಪ್ರಸ್ತಾಪಿಸಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಜಿಲ್ಲೆಯಲ್ಲಿರುವ ಕದಂಬ ನೌಕಾನೆಲೆ ಯೋಜನೆಯಿಂದಾಗಿ ಸಾಕಷ್ಟು ಮಂದಿ ಮೀನುಗಾರರು ನೆಲೆಯ ಜೊತೆಗೆ ಮೀನುಗಾರಿಕೆಗೆ ಇದ್ದ ಹಲವು ಕಡಲತೀರಗಳನ್ನ ಕಳೆದುಕೊಂಡಿದ್ದಾರೆ. ಇದೀಗ ಸಾಗರಮಾಲಾ ಯೋಜನೆ ಜಾರಿಯಾದಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳ ಉದ್ಯೋಗವನ್ನ ಕಸಿದುಕೊಂಡಂತಾಗಲಿದ್ದು ಸರ್ಕಾರ ಈ ಯೋಜನೆಯನ್ನ ಬೇರೆಡೆಗೆ ಸ್ಥಳಾಂತರಿಸುವ ಮೂಲಕ ನಮ್ಮನ್ನ ಉಳಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.
ಒಟ್ಟಾರೇ ರಾಜ್ಯದ ಕರಾವಳಿಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸಾಗರಮಾಲಾ ಯೋಜನೆ ವಿರೋಧದ ಹೋರಾಟ ಇದೀಗ ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರವಾಗುತ್ತಿರೋದಂತೂ ಸತ್ಯ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಯೋಜನೆಯಿಂದ ಮೀನುಗಾರಿಕೆಗೆ ಎದುರಾಗಲಿರುವ ಸಮಸ್ಯೆಗಳ ಕುರಿತು ಮೀನುಗಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಅಗತ್ಯ: ಸಂಸದ ಬಿ.ವೈ. ರಾಘವೇಂದ್ರ