ಕಾರವಾರ: ವಾರಾಂತ್ಯ ಬಂದರೆ ಸಾಕು ನಾನಾ ಭಾಗಗಳ ಜನರು ಉತ್ತರಕನ್ನಡ ಜಿಲ್ಲೆಯ ಹತ್ತಾರು ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಾರೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ದಾಂಡೇಲಿ ಹಾಗೂ ಜೋಯಿಡಾಕ್ಕೆ ಜಲಸಾಹಸ ಕ್ರೀಡೆಗೆಂದು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇತ್ತೀಚೆಗೆ ನಡೆದ ಒಂದು ಅವಘಡದಿಂದಾಗಿ ಪ್ರವಾಸಿಗರ ಸುರಕ್ಷತೆಯ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ದಾಂಡೇಲಿ, ಜೋಯಿಡಾ ವ್ಯಾಪ್ತಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಡಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದು, ಅದರಲ್ಲೂ ವಾರಾಂತ್ಯ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ತಂಡೋಪ ತಂಡವಾಗಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದುಬರುತ್ತದೆ.
ಇಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸುವ ಸಿಬ್ಬಂದಿಗಳು ಸುರಕ್ಷಿತ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ರ್ಯಾಫ್ಟಿಂಗ್ ನಡೆಸುವ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಹೇರಿಕೊಂಡ ಪರಿಣಾಮ ರ್ಯಾಫ್ಟ್‌ವೊಂದು ಬಂಡೆಗಳ ನಡುವೆ ಸಿಲುಕಿಕೊಂಡು ಪ್ರವಾಸಿಗರನ್ನು ಅಪಾಯಕ್ಕೆ ದೂಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಇಲ್ಲಿ ಸಾಕಷ್ಟು ಮಂದಿ ಪರವಾನಗಿ ಇಲ್ಲದೆಯೇ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಜಲಸಾಹಸ ಕ್ರೀಡೆಗಳನ್ನು ಸುರಕ್ಷಿತವಾಗಿ ನಡೆಸಲು, ಅನಧಿಕೃತ ಜಲಸಾಹಸ ಕ್ರೀಡೆಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ.
ಈ ಬಗ್ಗೆ ಪರವಾನಗಿ ಪಡೆದು ಜಲಸಾಹಸ ಕ್ರೀಡೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಜಲಕ್ರೀಡೆ ಆಯೋಜಕರು, ಹೆಚ್ಚಿನ ಪ್ರವಾಸಿಗರು ಆಗಮಿಸುವ ಅವಧಿಯಲ್ಲಿ ಈ ಜಲಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಿ ಪ್ರವಾಸೋದ್ಯಮಕ್ಕೆ ಅಡ್ಡಿಪಡಿಸಲಾಗುತ್ತಿದೆ ದೂರಿದ್ದರು. ಈ ಸಂಬಂಧ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಪರವಾನಗಿ ಪಡೆದು ಜಲಸಾಹಸ ಕ್ರೀಡೆ ನಡೆಸುತ್ತಿದ್ದವರಿಗೆ ಯಾವುದೇ ನಿರ್ಬಂಧ ಇಲ್ಲ. ಪರವಾನಗಿ ಇಲ್ಲದವರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಬೇಸಿಗೆ ರಜಾದಿನಗಳ ಅವಧಿಯಾಗಿದ್ದು ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ ದಾಂಡೇಲಿ, ಜೋಯಿಡಾ ಭಾಗದ ರೆಸಾರ್ಟ್, ಹೋಂಸ್ಟೇಗಳಿಗೆ ಆಗಮಿಸುತ್ತಾರೆ. ಆದರೆ ಇಲ್ಲಿ ಜಲಸಾಹಸ ಕ್ರೀಡೆ ನಡೆಸುತ್ತಿರುವ ಸಾಕಷ್ಟು ಮಂದಿ ಆಯೋಜಕರು ಪರವಾನಗಿ ಇಲ್ಲದೆ ರ್ಯಾಫ್ಟಿಂಗ್ ನಡೆಸುತ್ತಿರುವುದಾಗಿ ಹೇಳಲಾಗಿದೆ. ಜೊತೆಗೆ ಪ್ರವಾಸಿಗರ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವುದಾಗಿ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉತ್ತರಾಖಂಡ ಹಾಗೂ ರಾಜ್ಯದ ಕೊಡಗು ಮಾದರಿಯಲ್ಲಿ ರ್ಯಾಫ್ಟಿಂಗ್, ಕಯಾಕಿಂಗ್‌ನಂತಹ ಜಲಸಾಹಸ ಕ್ರೀಡೆಗಳನ್ನು ಸುರಕ್ಷಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಸುರಕ್ಷಿತ ಪ್ರವಾಸೋದ್ಯಮದ ಜೊತೆಗೆ ಆಯೋಜಕರ ಒಳಿತಿಗಾಗಿಯೇ ಜಿಲ್ಲಾಡಳಿತ ಈ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಇನ್ನು ದಾಂಡೇಲಿ, ಜೋಯಿಡಾ ಭಾಗದಲ್ಲಿ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳ ಹಿನ್ನಲೆಯನ್ನ ಪರಿಶೀಲಿಸಿದಾಗ 2013 ರಿಂದ ಇದುವರೆಗೆ ಸಾಕಷ್ಟು ಅವಘಡಗಳು ಸಂಭವಿಸಿರುವುದು ಬೆಳಕಿಗೆ ಬಂದಿದ್ದು ಇದುವರೆಗೆ 8 ವಾಟರ್‌ಸ್ಪೋರ್ಟ್ಸ್ ಆಪರೇಟರ್‌ಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಪರೇಟರ್‌ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪೆನ್ನೇಕರ್ ಸೂಚಿಸಿದ್ದಾರೆ.
ಜಿಲ್ಲೆಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಸಾಹಸ ಕ್ರೀಡೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲು ಜಿಲ್ಲಾಡಳಿತ ಮುಂದಾಗಿರುವುದು ಒಳ್ಳೆಯ ಕ್ರಮವೇ ಆಗಿದೆ. ಆದರೆ ಇದಕ್ಕೆ ಕೆಲ ಆಪರೇಟರ್‌ಗಳಿಂದ ತೀವ್ರ ವಿರೋಧ ಕೂಡ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:ಪಿಎಸ್‌ಐ ಅಕ್ರಮ: ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ವಿಚಾರಣೆ, ಮತ್ತೊಬ್ಬ ಕಾನ್ಸ್ಟೇಬಲ್ ಬಂಧನ