ಶಿರಸಿ: ಒಂದೆಡೆ ಮಳೆಯಾದರೆ, ಇನ್ನೊಂದೆಡೆ ಗುಡ್ಡ ಕುಸಿತದ ಭಯ. ಇದರ ನಡುವೆಯೇ ಸಂಪರ್ಕ ಕಲ್ಪಿಸಿಕೊಳ್ಳುವ ಆತುರ. ಇದೆಲ್ಲಾ ಕಾಣಸಿಗುವುದು ಯಾವುದೋ ನದಿ ಪಾತ್ರದಲ್ಲಿ ಅಥವಾ ಗುಡ್ಡಗಾಡು ಪ್ರದೇಶದಲ್ಲಿ ಅಲ್ಲ. ಬದಲಿಗೆ ರಸ್ತೆಯಂತಹ ಮೂಲಭೂತ ಸೌಕರ್ಯ ವಂಚಿತ ಶಿರಸಿ ತಾಲೂಕಿನ ಧೋರಣಗಿರಿ ಗ್ರಾಮದಲ್ಲಿ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 38ಕಿ.ಮೀ. ದೂರದಲ್ಲಿರುವ ಧೋರಣಗಿರಿ ಗ್ರಾಮ ಮಳೆಗಾಲ ಆರಂಭವಾದರೆ ಅಕ್ಷರಶಃ ಕುಗ್ರಾಮದಂತಾಗುತ್ತದೆ. ಸುಮಾರು 80 ಕ್ಕೂ ಹೆಚ್ಚಿನ ಕುಟುಂಬಗಳು ರಸ್ತೆ ಸಂಪರ್ಕ ಇಲ್ಲದೇ ಪರದಾಡಬೇಕಾಗುತ್ತದೆ. ಗುಡ್ಡ ಕುಸಿತ ರಸ್ತೆಯಲ್ಲಿ ಸಾಮಾನ್ಯವಾಗಿದ್ದು, ಡಾಂಬರೀಕರಣ ಇಲ್ಲದೇ ಓಡಾಡಲೂ ಅಸಾಧ್ಯ ಎನ್ನುವ ಸ್ಥಿತಿ ಇದೆ.
ತಾಲೂಕಿನ ಕಕ್ಕಳ್ಳಿಯಿಂದ ಧೋರಣಗಿರಿಗೆ ತೆರಳುವ ಸುಮಾರು 3ಕಿ.ಮೀ. ರಸ್ತೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಯಾವುದೇ ವಾಹನ ಸಂಚಾರವೂ ಸಾಧ್ಯವಿಲ್ಲ ಎಂಬಂತಾಗಿದೆ. ಧೋರಣಗಿರಿಗೆ ತೆರಳಲು ಶಿರಸಿ ಹಾಗೂ ಯಲ್ಲಾಪುರ ಎರಡೂ ಕಡೆ ರಸ್ತೆ ಇದ್ದು, ಮಳೆಗಾಲದಲ್ಲಿ ಯಲ್ಲಾಪುರದ ಗುಳ್ಳಾಪುರ ಸೇತುವೆ ಉಕ್ಕಿ ಹರಿದರೆ ಗ್ರಾಮ ಯಾವ ನಗರಕ್ಕೂ ಸಂಪರ್ಕ ಇಲ್ಲದ ಸ್ಥಿತಿಗೆ ತಲುಪುತ್ತದೆ.
ಧೋರಣಗಿರಿಗೆ ತೆರಳುವ ರಸ್ತೆಯನ್ನು ಪ್ರತಿ ವರ್ಷ ಗ್ರಾಮಸ್ಥರೇ ರಿಪೇರಿ ಮಾಡಿಕೊಳ್ಳುತ್ತಿದ್ದು, ಜನಪ್ರತಿನಿಧಿಗಳ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಜೆಸಿಬಿಯ ಮೂಲಕ ರಸ್ತೆ ತೆರವುಗೊಳಿಸಿ ಗ್ರಾಮಸ್ಥರೇ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ.
ಕಳೆದ 2 ವರ್ಷಗಳಿಂದ ಧೋರಣಗಿರಿಗೆ ಬಸ್ ವ್ಯವಸ್ಥೆಯಿಲ್ಲ. ರಸ್ತೆ ಕಚ್ಚಾ ಇರುವ ಕಾರಣ ಶಾಲಾ ಮಕ್ಕಳನ್ನು ಪಾಲಕರೇ ಹಣ ಹಾಕಿ ಜೀಪಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸಂಪರ್ಕ ಸಾಧಿಸಲು ಯಾವುದೇ ಪ್ರಮುಖ ವಾಹನಗಳು ಇಲ್ಲಿ ಲಭ್ಯವಿಲ್ಲ. ಅಲ್ಲದೇ ಕಳೆದ 2 ವರ್ಷಗಳಿಂದ ಇಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅಂದಾಜು 95 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದರೂ ಗುತ್ತಿಗೆದಾರರ ವಿಳಂಬದಿಂದ ಅಭಿವೃದ್ಧಿ ಕಂಡಿಲ್ಲವೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶೀಘ್ರದಲ್ಲಿ ಶಾಶ್ವತ ಪರಿಹಾರ ಆಗಬೇಕು ಎಂದು ಆಗ್ರಹಿಸಿದ್ದಾರೆ.