ಕಾರವಾರ: ನಿಗದಿಗಿಂತ ಹೆಚ್ಚಿನ ಜನರನ್ನು ರಿವರ್ ರ್ಯಾಫ್ಟಿಂಗ್ಗೆ ಕರೆದುಕೊಂಡು ಹೋದ ಪರಿಣಾಮ ಬೋಟ್ ಅಪಾಯಕ್ಕೆ ಸಿಲುಕಿರುವ ಘಟನೆ ತಾಲೂಕಿನ ಗಣೇಶಗುಡಿ ಸಮೀಪ ಕಾಳಿ ನದಿಯಲ್ಲಿ ನಡೆದಿದೆ. ಈ ವೇಳೆ, ಅಪಾಯಕ್ಕೆ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ.
ದಾವಣಗೆರೆಯಿಂದ ಬಂದವರು ಎನ್ನಲಾದ ಪ್ರವಾಸಿಗರು ರಿವರ್ ರ್ಯಾಫ್ಟಿಂಗ್ಗೆ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದಾರೆ. ಪರಿಣಾಮ, ಮಕ್ಕಳು ಸೇರಿ 12 ಮಂದಿ ಅಪಾಯಕ್ಕೆ ಸಿಲುಕಿದ್ದರು. ಬೋಟ್ ಭಾರ ಹೆಚ್ಚಾಗಿ ಮುಳುಗುವ ಹಂತಕ್ಕೆ ತಲುಪಿತ್ತು. ತಕ್ಷಣ ಆಯೋಜಕರು ಸ್ಥಳೀಯ ಸಾಹಸಿಗಳ ಮೂಲಕ ಇನ್ನೊಂದು ಬೋಟ್‍ನಲ್ಲಿ ತೆರಳಿ ಎಲ್ಲಾ ಪ್ರವಾಸಿಗರನ್ನು ಅಪಾಯದಿಂದ ಕಾಪಾಡಿದರು.
ಸಣ್ಣ ರ‍್ಯಾಫ್ಟಿಂಗ್ ಬೋಟ್‍ನಲ್ಲಿ ಗರಿಷ್ಠ 6 ಜನರನ್ನು ಕರೆದೊಯ್ಯಬಹುದು. ಆದರೆ 12 ಜನರನ್ನು ಬೋಟ್‍ನಲ್ಲಿ ಕರೆದೊಯ್ಯಲಾಗಿದೆ. ಇದೇ ಅವಘಡಕ್ಕೆ ಕಾರಣ ಎಂದು ಹೇಳಲಾಗ್ತಿದೆ. ರಜಾ ದಿನ ಇರುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅದರಲ್ಲೂ ಜೋಯಿಡಾ, ದಾಂಡೇಲಿ ಭಾಗಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿ, ಇಲ್ಲಿನ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ಎಂಜಾಯ್ ಮಾಡುತ್ತಾರೆ.
ಇದನ್ನೂ ಓದಿ: ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!