ಕಾರವಾರ: ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮರಳಿದ ತಾಲೂಕಿನ ಚೇಂಡಿಯಾದ ಭಜನಕೇರಿಯ ಯೋಧ ದೀಪಕ್ ಪಾಂಡುರಂಗ ಗೌಡ ಅವರನ್ನು ಸ್ವ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಯೋಧನಾಗಿ ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ್, ಅಸ್ಸೋಂ, ದೆಹಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಿದ್ದರು. ಶನಿವಾರ ಹುಟ್ಟೂರಿಗೆ ಮರಳಿದ ಧೀರ ನಿವೃತ್ತ ಯೋಧನಿಗೆ ಸ್ಥಳೀಯ ವಿವಿಧ ಸಂಘಟನೆಗಳು, ಊರಿನ ಯುವಕರು, ಹಿರಿಯರು ಡೋಲು ವಾದ್ಯದೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಿದರು. ಮಾತ್ರವಲ್ಲದೆ ಮನೆಗೆ ಮರಳಿದಾಗ ತಂದೆ ಪಾಂಡುರಂಗ, ತಾಯಿ ಗಂಗಾಬಾಯಿ ಆರತಿ ಬೆಳಗಿ ಸ್ವಾಗತಿಸಿದರು.
ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ ನನಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಇಷ್ಟೊಂದು ಅದ್ಧೂರಿಯಾಗಿ ಸ್ವಾಗತಿಸಿರುವುದು ಖುಷಿ ತಂದಿದೆ. ಈ ಪ್ರೀತಿ ಸದಾ ನಮ್ಮೆಲ್ಲರಲ್ಲಿಯೂ ಇರಲಿ. ಮಾತ್ರವಲ್ಲದೆ ಯುವಕರು ದೇಶ ಸೇವೆಗೆ ಮುಂದೆ ಬರಬೇಕು. ಆ ಮೂಲಕ ದೇಶಕ್ಕೆ ತಮ್ಮದೇಯಾದ ಕೊಡುಗೆ ನೀಡಬೇಕು ಎಂದು ನಿವೃತ್ತ ಯೋಧ ದೀಪಕ್ ಪಾಂಡುರಂಗ ಗೌಡ ಅಭಿಪ್ರಾಯ ಹಂಚಿಕೊಂಡರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಾಧನಾ ಪಿ. ಚೇಂಡೆಕರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜ, ಊರಿನ ಗಣ್ಯರಾದ ಶಿವರಾಮ ಗೌಡ, ವಿಷ್ಣು ಗೌಡ, ಲಿಂಗಾಗೌಡ, ಉದಯಗೌಡ, ಶ್ರೀಕಾಂತ ಗೌಡ, ವಸಂತ ಗೌಡ, ಪಾಂಡುರಂಗ ಗೌಡ, ಪ್ರಶಾಂತ ನಾಯ್ಕ ಮತ್ತಿತರರು ಹಾಜರಿದ್ದರು.