ಕಾರವಾರ: ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದ ಅವಧಿಯಲ್ಲಿ ಕೆಲಸ ಮತ್ತು ಮಕ್ಕಳ ಆರೈಕೆ ಎರಡನ್ನೂ ನಿಭಾಯಿಸುವುದು ಒಂದು ಸವಾಲು. ಇದರಿಂದ ಅವರ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ನೌಕರರ ಕೆಲಸವೂ ವೇಗ ಪಡೆದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಮಹಿಳಾ ಸಿಬ್ಬಂದಿಯ ಮಕ್ಕಳನ್ನು ಪಾಲನೆ ಮಾಡಲು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲೇ ಇದೀಗ ಸರ್ಕಾರಿ ಆದೇಶದಂತೆ ಬಾಲಭವನವನ್ನು ತೆರೆಯಲಾಗಿದೆ. ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ರೆಸ್ಟ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಕಚೇರಿಯಲ್ಲಿ ಚಿಕ್ಕ ಮಕ್ಕಳನ್ನು ಹೊಂದಿರುವ ನೌಕರರು ತಮ್ಮ ಮಕ್ಕಳ ಬಗ್ಗೆ ಯೋಚನೆ ಇಲ್ಲದೇ ಕೆಲಸ ಮಾಡಬಹುದಾಗಿದ್ದು, ಇದೀಗ ಇವರ ಉತ್ತಮ ಕೆಲಸದ ನಿರೀಕ್ಷೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಪೇಕ್ಷಿಸಿದ್ದಾರೆ.
ಸದ್ಯ ಜಿಲ್ಲಾ ಪಂಚಾಯಿತಿ ಆವರದಲ್ಲಿ ಮಹಿಳಾ ಸಿಬ್ಬಂದಿ ಮಕ್ಕಳ ಪೋಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಇದೀಗ ತಾಲೂಕು ಕೇಂದ್ರದಲ್ಲೂ ಸಹ ಶೀಘ್ರದಲ್ಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆದಿದೆ. ಸದ್ಯ ಹೆಚ್ಚು ಮಹಿಳೆಯರಿರುವ ಕಚೇರಿಯಲ್ಲಿ ಇದೀಗ ನೌಕರ ಮಕ್ಕಳ ಪೋಷಣೆಗೆ ಶಿಶುಪಾಲನಾ ಕೇಂದ್ರ ಹಾಗೂ ಮಹಿಳೆಯರಿಗೆ ವಿಶ್ರಾಂತಿ ಗೃಹ ವ್ಯವಸ್ಥೆ ಮಾಡಲಾಗಿದೆ.
ಮಕ್ಕಳನ್ನು ಆಕರ್ಷಿಸಲು ಬಣ್ಣ ಬಣ್ಣದ ಚಿತ್ತಾರ ಹಾಗೂ ವಿವಿಧ ಆಟಿಕೆಗಳಿದ್ದರೆ, ಮಹಿಳಾ ಸಿಬ್ಬಂದಿಗಾಗಿ ಆಸನ, ರೆಫ್ರಿಜಿರೇಟರ್, ಚಿಕ್ಕ ಪುಟ್ಟ ಅಡುಗೆ ಮಾಡಿಕೊಳ್ಳಲು ಸಹ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ತಮಗೆ ಅನುಕೂಲವಾಗಿದೆ. ಮಹಿಳೆಯರಿಗೆ ಹಲವು ಸಮಸ್ಯೆ ಇರುತ್ತೆ, ಅಂತಹ ಸಮಸ್ಯೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈಗ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಚೇರಿಯಲ್ಲೇ ಕಲ್ಪಿಸಿಕೊಟ್ಟಿದ್ದು ಸಹಾಯವಾಗಿದೆ ಎಂಬುದು ಇಲ್ಲಿನ ನೌಕರರ ಮಾತು.
ಪುಟ್ಟ ಮಕ್ಕಳು ತಂದೆ, ತಾಯಿ ಕಣ್ಣಮುಂದೆಯೇ ಇರಬೇಕು ಎಂದು ಬಯಸುತ್ತಾರೆ. ಶಿಶುಪಾಲನಾ ಕೇಂದ್ರ ಸಿದ್ಧಗೊಂಡಿರುವ ಕಾರಣ ಜಿಲ್ಲಾ ಪಂಚಾಯಿತಿಯ ನೌಕರರಿಗೆ ಇನ್ನುಮುಂದೆ ಆ ಚಿಂತೆ ಕಡಿಮೆಯಾಗಲಿದೆ. ಇದರೊಂದಿಗೆ ಪುರುಷ ಮತ್ತು ಮಹಿಳಾ ನೌಕರರಿಗೆ ವಿಶ್ರಾಂತಿ ಕೊಠಡಿಯೂ ಇದ್ದು, ನೌಕರರಿಗೂ ಸಹ ಮತ್ತಷ್ಟು ಕೆಲಸ ಮಾಡಲು ಉತ್ತೇಜಿಸಿದಂತಾಗಿದೆ.
ಇದನ್ನೂ ಓದಿ: ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಏಕೀ ಕೆಟ್ಟ ಉತ್ಸಾಹ? : ಹೆಚ್ಡಿಕೆ