ಶಿರಸಿ: ಪ್ರತಿ ನಿತ್ಯ ನೂರಾರು ರೋಗಿಗಳು ಆಗಮಿಸುವ ಶಿರಸಿಯ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದ್ರೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಹೈಟೆಕ್ ಆರೋಗ್ಯ ಸೇವೆ ಮರೀಚಿಕೆಯಾಗಿದೆ.
ಶಿರಸಿಯಿಂದ 25 ಕಿ.ಮೀ. ದೂರದಲ್ಲಿರುವ ಬನವಾಸಿ ತಾಲೂಕು ಕೇಂದ್ರದಷ್ಟೆ ಪ್ರಾಮುಖ್ಯತೆ ಹೊಂದಿದ್ದು, ಪ್ರತಿ ದಿವಸ ಸಾವಿರಾರು ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲಿ ಪ್ರತಿ ದಿವಸ ನೂರಾರು ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಶಿರಸಿ ದೂರವಾದ ಕಾರಣ ಬನವಾಸಿಯ ಸುತ್ತ ಮುತ್ತಲಿನ ಹಳ್ಳಿ ಪ್ರದೇಶದಿಂದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಬರುವುದು ವಾಡಿಕೆಯಾಗಿದೆ. ಆದರೆ ಅಲ್ಲಿ ಸೂಕ್ತ ಸೌಲಭ್ಯ ಇಲ್ಲದೇ, ಮೂಲಭೂತ ಸೌಕರ್ಯದ ಕೊರತೆಯೂ ಇದ್ದು, ಎಮ್ಬಿಬಿಎಸ್ ಓದಿರುವ ವೈದ್ಯರ ಕೊರತೆಯೂ ಇದೆ.
ಕಳೆದ ಹಲವಾರು ವರ್ಷಗಳಿಂದ ಆಯುರ್ವೇದ ವೈದ್ಯರೇ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆಯನ್ನು ನೋಡಿಕೊಳ್ಳುತ್ತಿದ್ದು, ಎಮ್ಬಿಬಿಎಸ್ ವೈದ್ಯರ ಅವಶ್ಯಕತೆಯಿದೆ. ಅಲ್ಲದೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಕನಿಷ್ಠ 50 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯನ್ನಾದರೂ ಮಾಡಿಕೊಡಬೇಕು ಎನ್ನುವ ಬೇಡಿಕೆ ಸ್ಥಳೀಯರದ್ದಾಗಿದೆ.