ಉತ್ತರ ಕನ್ನಡ :ಕಾರವಾರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರರ ಬದುಕು ಇದೀಗ ಬೀದಿಗೆ ಬಂದಿದೆ.
ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಏಜೆನ್ಸಿಗಳು ತಾರತಮ್ಯ ನಡೆಸುವುದರ ಜತೆಗೆ ಇದೀಗ ಕರಾರು ಪತ್ರವೊಂದನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕದೇ ಇದ್ದವರನ್ನು ಕೆಲಸದಿಂದ ತೆಗೆಯುವ ಬೆದರಿಕೆ ಒಡ್ಡಿದ ಆರೋಪ ಕೇಳಿ ಬಂದಿದೆ. ವೈದ್ಯಕೀಯ ಕಾಲೇಜು ಹಾಗೂ ಸಿವಿಲ್ ಆಸ್ಪತ್ರೆಯಲ್ಲಿ ಅಟೆಂಡರ್, ಗಾರ್ಡ್,ಲ್ಯಾಬ್ ಟೆಕ್ನಿಶಿಯನ್ ಹೀಗೆ ಬೇರೆ ಬೇರೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ 150ಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಈ ನೌಕರರೆಲ್ಲಾ ಇಂದು ಕೆಲಸ ತೊರೆದು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಭ್ರಷ್ಟ ಅಧಿಕಾರಿಗಳು ಹಾಗೂ ಏಜೆನ್ಸಿಗಳ ತಾರತಮ್ಯದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಕಾರವಾರದಲ್ಲಿ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುವ ಏಜೆನ್ಸಿಗಳಾದ ಭಾರತ್ ಸೆಕ್ಯೂರಿಟಿ ಏಜೆನ್ಸಿ, ಯುನಿವರ್ಸಲ್ ಸೆಕ್ಯೂರಿಟಿ ಏಜೆನ್ಸಿ, ಮಧುರಾ ಏಜೆನ್ಸಿ, ಸ್ಕಾಯಲೈನ್ ಏಜೆನ್ಸಿಗಳು ಕಾನೂನುಬದ್ಧವಾಗಿ ನೀಡಬೇಕಿದ್ದ ಕೆಲಸಕ್ಕೆ ತಕ್ಕ ವೇತನ, ಆರೋಗ್ಯ ವಿಮೆ, ಪಿಎಫ್ ಹೀಗೆ ಯಾವುದೇ ಸೌಲಭ್ಯವನ್ನು ನೀಡದೆ ವಂಚಿಸುತ್ತಿವೆ ಎಂದು ಆರೋಪಿಸಿದ್ರು. ಇನ್ನು, ಇದೇ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ಧವೂ ಹೊರಗುತ್ತಿಗೆ ನೌಕರರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 15 ವರ್ಷಗಳಿಂದ ಕೆಲವರು ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಕೇವಲ 8 ಸಾವಿರ ಸಂಬಳ ನೀಡಲಾಗುತ್ತಿದೆ. ಇಷ್ಟಾದರೂ ಅಷ್ಟೇ ಹಣದಲ್ಲಿ ದುಡಿಯುತ್ತಿದ್ದವರು ಕಾನೂನು ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಪ್ರಶ್ನೆ ಮಾಡದಂತೆ ಏಜೆನ್ಸಿಗಳು ಕರಾರು ಪತ್ರವೊಂದನ್ನು ಸಿದ್ದಪಡಿಸಿದ್ದು, ಅದಕ್ಕೆ ಸಹಿ ಹಾಕದವರನ್ನು ತೆಗೆಯಲಾಗುತ್ತಿದೆ. ಇದು ನೂರಾರು ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಹೊರಗುತ್ತಿಗೆ ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.