ಶಿರಸಿ: ಮುಂಡಗೋಡ ತಾಲೂಕಿನ ಮಜ್ಜಿಗೇರಿ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ನಡೆದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಲ್ಲಿ ಒಬ್ಬನಿಗೆ 10 ವರ್ಷ, ಇಬ್ಬರಿಗೆ ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ.ಗಳ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಾಲ್ವಾಡೆಯವರು ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘ ಕಾಲದ ವಿಚಾರಣೆ ನಡೆಸಿ, ತಾಲೂಕಿನ ಮಜ್ಜಿಗೇರಿ ಗ್ರಾಮದ ನಾಗರಾಜ ಬರಮಣ್ಣ ಭೋವಿವಡ್ಡರಗೆ 10 ವರ್ಷ ಜೈಲು ಶಿಕ್ಷೆ, ರಮೇಶ ಯಲ್ಲಪ್ಪ ಭೋವಿ ಮತ್ತು ಮಂಜುನಾಥ ಹನುಮಂತಪ್ಪ ಹಾವೇರಿ ಇವರಿರ್ವರಿಗೂ ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದ್ದಾರೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮಜ್ಜಿಗೇರಿ ಗ್ರಾಮದಲ್ಲಿ 2014ರ ಅಗಷ್ಟ 7 ರಂದು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಕುರಿತು ಅಂದು ಕರ್ತವ್ಯದಲ್ಲಿದ್ದ ಪಿಐ., ಹೆಚ್ ಕೆ ಪಠಾನ್ ತನಿಖೆ ನಡೆಸಿ ಆರೋಪಿತರನ್ನು ಮತ್ತು ಆರೋಪಿತರ ಮೇಲೆ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಸುಭಾಸ ಪಿ ಖೈರನ್ನ ವಾದ ಮಂಡಿಸಿದ್ದರು.