ಕಾರವಾರ: ಜಾತ್ರೆ ಅಂದಾಕ್ಷಣ ನಮಗೆ ನೆನಪಾಗೋದು ಅಲ್ಲಿನ ತಿಂಡಿ ತಿನಿಸುಗಳು. ಹೂವು, ಹಣ್ಣು ಕಾಯಿ, ಮಕ್ಕಳ ಆಟದ ಸಾಮಗ್ರಿಗಳು. ಆದರೆ, ಕಾರವಾರ ನಗರದಲ್ಲಿ ನಡೆದ ಜಾತ್ರೆಯೊಂದು ನಾವು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿತ್ತು. ಜಾತ್ರೆಗೆ ಆಗಮಿಸಿದ ಸಾವಿರಾರು ಜನರು ದೇವರ ದರ್ಶನ ಪಡೆಯೋದಕ್ಕಿಂತ ಹೆಚ್ಚಾಗಿ ಜಾತ್ರೆ ನಡೆಯುವ ಸ್ಥಳದಲ್ಲಿನ ಮನೆಗಳ ಮುಂದೆ ಹಾಕಿರುವ ರಂಗೋಲಿ ನೋಡುವುದರಲ್ಲಿಯೇ ಮೈಮರೆತಿದ್ದರು.
ಒಂದೆಡೆ ನೋಡುಗರ ಕಣ್ಣು ಕುಕ್ಕಿಸುವಂತೆ ರಂಗೋಲಿಯಲ್ಲಿ ಮೂಡಿ ಬಂದಿರುವ ಹರಿದ ಕಾಗದವೊಂದನ್ನು ನೋಡುತ್ತಿರುವ ಅಜ್ಜಿ. ಕಾಂತಾರ ಸಿನಿಮಾದ ಕೋಣದ ಓಟ, ನಟ ಪುನೀತ್ ರಾಜ್ಕುಮಾರ್, ಕೆಜಿಎಫ್ 2 ಹಿರೋ ಯಶ್, ಅಲ್ಲು ಅರ್ಜುನ್ ಸೇರಿದಂತೆ ಹಲವರ ಭಾವಚಿತ್ರಗಳು, ಇನ್ನೊಂದೆಡೆ ಗಂಧದಗುಡಿ ಸಿನಿಮಾದ ಪುನೀತ್ ರಾಜಕುಮಾರ್ ಚಿತ್ರ ಮತ್ತು ಬಣ್ಣ ಬಣ್ಣದ ಚುಕ್ಕಿ ರಂಗೋಲಿಗಳು. ಮತ್ತೊಂದೆಡೆ ರಂಗೋಲಿಗಳನ್ನು ಕುತೂಹಲದಿಂದ ನೋಡುತ್ತಾ ಸಂತಸಪಡುತ್ತಿರುವ ನೂರಾರು ಜನ. ಈ ದೃಶ್ಯಗಳು ಕಂಡು ಬಂದಿದ್ದು, ಕಾರವಾರದ ರಂಗೋಲಿ ಜಾತ್ರೆಯಲ್ಲಿ.
ಗಮನ ಸೆಳೆದ ರಂಗೋಲಿ: ಹೌದು ನಗರದ ಮಾರುತಿ ಗಲ್ಲಿಯ ಮಾರುತಿ ಮಂದಿರದಲ್ಲಿ ಇವತ್ತು ಜಾತ್ರಾ ಮಹೋತ್ಸವ ನಡೆಯಿತು. ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಜಾತ್ರೆಯ ರಂಗೋಲಿ ಸ್ಪರ್ಧೆಯಲ್ಲಿ ಚಿತ್ತಾಕರ್ಷಕ ರಂಗೋಲಿಗಳು ಗಮನ ಸೆಳೆದವು.
ಅದರಲ್ಲೂ ಸ್ನಾನ ಮಾಡುವ ಬಾಲಕ, ಬೆಕ್ಕನ್ನು ಹಿಡಿದುಕೊಂಡಿರುವ ಅಜ್ಜಿ, ಕಾಂತಾರದ ಕೊನೆಯಲ್ಲಿನ ರಿಶಬ್ ಶೆಟ್ಟಿ ನರ್ತನ. ಅಲ್ಲು ಅರ್ಜುನ್, ಯಶ್ ಸೇರಿದಂತೆ ಸಿನೆಮಾ ನಟರ ನೈಜ ರೂಪದ ರಂಗೋಲಿಗಳು ಆಕರ್ಷಣೆಗೆ ಕಾರಣವಾಯಿತು. ಸ್ಪರ್ಧೆ ಇರುವುದರಿಂದ ಪ್ರತಿ ಮನೆಯಲ್ಲಿಯೂ ಆಕರ್ಷಕ ರಂಗೋಲಿಗಳನ್ನು ಬಿಡಿಸಲಾಗಿದ್ದು, ಜಾತ್ರೆಯಂದು ರಂಗೋಲಿ ಬಿಡಿಸುವುದೇ ಒಂದು ರೀತಿ ಖುಷಿ ಅಂತಾರೇ ಸ್ಪರ್ಧೆಯಲ್ಲಿ ಭಾಗವಹಿಸಿದವರು.
ಬೃಹತ್ ಹನುಮಾನ್ ಚಿತ್ರ: ಇನ್ನು ಮಾರುತಿ ಜಾತ್ರೆಯಲ್ಲಿ ಕೇವಲ ಖ್ಯಾತ ವ್ಯಕ್ತಿಗಳ ಭಾವಚಿತ್ರ ಮಾತ್ರವಲ್ಲದೇ ಚುಕ್ಕಿ ರಂಗೋಲಿ, ಹೂವಿನಿಂದ ಹಾಕಿದ ರಂಗೋಲಿ, ಧಾನ್ಯಗಳಿಂದ ಬಿಡಿಸಿದ ರಂಗೋಲಿಗಳನ್ನು ಸಹ ಪ್ರದರ್ಶಿಸಲಾಯಿತು. ತೆಂಗಿನ ಕಾಯಿ ತುರಿಯಿಂದ ಬೃಹತ್ ಹನುಮಾನ್ ಚಿತ್ರ ಬಿಡಿಸಲಾಗಿತ್ತು. ಇನ್ನು ಮಾರುತಿ ಜಾತ್ರೆಯಲ್ಲಿ ರಂಗೋಲಿಗಳೇ ಆಕರ್ಷಣೆ ಆಗಿರುವುದರಿಂದ ಜಾತ್ರೆಯನ್ನು ಯಾರೂ ಕೂಡಾ ಮಿಸ್ ಮಾಡಿಕೊಳ್ಳೊದಿಲ್ಲ. ಈ ಬಾರಿಯೂ ಸಾಕಷ್ಟು ಮಂದಿ ಆಗಮಿಸಿದ್ದು, ಆಕರ್ಷಕ ರಂಗೋಲಿಗಳು ಮೂಡಿ ಬಂದಿದೆ ಅಂತಾರೆ ಜಾತ್ರೆಗೆ ಬಂದವರು.
ಒಟ್ಟಾರೆ ಕೊರೊನಾ ನಡುವೆಯೂ ನಡೆದ ಈ ಭಾರಿಯ ರಂಗೋಲಿ ಜಾತ್ರೆ ಎಲ್ಲರ ಗಮನ ಸೆಳೆದಿದ್ದು, ಜಾತ್ರೆಯಲ್ಲಿ ಮೂಡಿ ಬಂದ ಸಾಕಷ್ಟು ರಂಗೋಲಿಗಳು ಜನರ ಆಕರ್ಷಣೆಗೆ ಕಾರಣವಾಯಿತು.
ಓದಿ: ರಂಗೋಲಿಯಲ್ಲಿ ಮೂಡಿಬಂದ ಸಾಯಿಬಾಬಾ.. ವಿಶ್ವ ದಾಖಲೆ ಬರೆದ ಪುಟ್ಟ ರಂಗೋಲಿ