ಕಾರವಾರ: ರಸ್ತೆಯುದ್ದಕ್ಕೂ ಸಾಲಾಗಿ ಜೋಡಿಸಿಟ್ಟ ಬಗೆ ಬಗೆಯ ಖಾದ್ಯಗಳು. ಒಮ್ಮೆ ಅತ್ತ ಕಡೆ ಸುಳಿದರೆ ಘಮ್ಮೆನ್ನುವ ವೈವಿಧ್ಯಮಯ ತಿನಿಸುಗಳನ್ನು ಖರೀದಿಸದೇ ಬರಲಾಗದು. ಇಂತಹದೊಂದು ಮಾರುಕಟ್ಟೆ ಜಿಲ್ಲೆಯ ಭಟ್ಕಳದಲ್ಲಿ ನಿರ್ಮಾಣಗೊಂಡಿದೆ.
ರಂಜಾನ್ ಮಾಸ ಆರಂಭವಾಗಿರುವುದರಿಂದ ಮುಸ್ಲಿಮರು ಉಪವಾಸ ಆಚರಣೆಯಲ್ಲಿದ್ದಾರೆ. ಸಂಜೆ ನಮಾಜ್ ಬಳಿಕ ಆಹಾರ ಸೇವನೆ ಮಾಡುವುದರಿಂದ ಇಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ತರಹೆವಾರಿ ಖಾದ್ಯಗಳ ಮಾರಾಟ ಜೋರಾಗಿರುತ್ತದೆ. ಭಟ್ಕಳದ ಹೂವಿನ ಚೌಕದಿಂದ ಚೌಥನಿ ಹೋಗುವ ರಸ್ತೆವರೆಗೂ ಟೇಬಲ್ಗಳ ಮೇಲೆ ಬಣ್ಣ ಬಣ್ಣದ ಖಾದ್ಯಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸಂಜೆ 7 ಗಂಟೆವರೆಗೂ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಇಲ್ಲಿ ಮುಸ್ಲಿಂರು ಮಾತ್ರವಲ್ಲದೆ ಇತರ ಸಮುದಾಯದವರೂ ಮುಗ್ಗಿಬಿದ್ದು ಖಾದ್ಯಗಳನ್ನು ಖರೀದಿ ಮಾಡುವುದು ವಿಶೇಷ.
ಮಾರುಕಟ್ಟೆಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ಖಾದ್ಯಗಳು ದೊರೆಯುತ್ತದೆ. ಸಸ್ಯಾಹಾರಗಳಾದ ಸಮೋಸ, ಬಟಾಟೆ ವಡೆ, ಆಲೂ ಬಜ್ಜಿ, ಮಿರ್ಚಿ, ಚಟ್ಟಂಬೊಡೆ, ಈರುಳ್ಳಿ ಬಜ್ಜಿ, ಅಪ್ಪಂ, ಹೋಳಿಗೆ, ಸಿರ್‌ಕುಂಬಾ, ಕಚೋರಿ, ನೀರದೋಸೆ, ಸಿಹಿ ಪಾಯಸ, ಖಾರ ಪಾಯಸ, ರಾಯತ, ಕಿಚಡಿ, ಚೈನಾ ಬಟಾನಿ, ಚೋಲೆ ಮಸಾಲ, ಮಸಾಲ ರೋಟಿ ಸೇರಿದಂತೆ ಇನ್ನಿತರ ತಿಂಡಿಗಳು ದೊರೆಯುತ್ತದೆ. ಹಾಗೆಯೇ ಚಿಕನ್, ಮಟನ್, ಮೀನು, ಚಿಪ್ಪಿಕಲ್ಲು, ನೀಲಿಕಲ್ಲು, ಸಿಗಡಿ ಬಳಸಿ ಸಿದ್ಧಪಡಿಸಿದ ಖಾದ್ಯಗಳಿರುತ್ತವೆ. ಎಗ್ ವಡಾ, ಚಿಪ್ಪಿ ಉಂಡೆ, ಪ್ಯಾಬಿಸ್, ಶಾಮಿ, ಪತ್ರಿ, ಧಮ್ ಬಿರಿಯಾನಿ, ಚಿಕನ್ ಸಮೋಸ, ಫಿಸ್ ಸಮೋಸ, ತಂದೂರಿ ಚಿಕನ್, ಮಸಾಲಾ ವಡೆ, ಅಪ್ಪಾಗುಡಿ, ಚೈನೀಸ್ ರೋಲ್, ಎಗ್‌ಪಿಜ್ಜಾ, ಬರ್ಗರ್ಗಳು ನೋಡಿದವರ ಬಾಯಲ್ಲಿ ನೀರೂರಿಸುತ್ತವೆ.
ಇನ್ನು ಭಟ್ಕಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದು ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸುತ್ತಾರೆ. ಸಂಜೆ ನಮಾಜ್ ಬಳಿಕವೇ ಕರ್ಜೂರ ಸೇವಿಸಿ ಮಾರುಕಟ್ಟೆಯಲ್ಲಿನ ಖಾದ್ಯವನ್ನು ಬಳಸುತ್ತಾರೆ. ಇದರಿಂದ ರಂಜಾನ್ ಮಾಸ ಆರಂಭವಾಗುತ್ತಿದ್ದಂತೆ ಪ್ರತಿ ವರ್ಷವೂ ಇಲ್ಲಿ ವಿಶೇಷ ತಿಂಡಿಗಳನ್ನು ಸಿದ್ದಪಡಿಸಿ ಮಾರಾಟ ಮಾಡಲಾಗುತ್ತದೆ. ಈ ವರ್ಷ ಕೂಡ ವಿಶೇಷ ಖಾದ್ಯಗಳನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದೇವೆ ಸಂಜೆ ಹೊತ್ತಿಗೆ ಎಲ್ಲವೂ ಖಾಲಿ ಆಗುತ್ತದೆ ಎನ್ನುತ್ತಾರೆ ವ್ಯಾಪಾರಿ ಇಮ್ರಾನ್ ಖಾನ್.