ಕಾರವಾರ: ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರಣರಲ್ಲ. ಬದಲಿಗೆ ರಾಹುಲ್ ಗಾಂಧಿಯ ಬಗೆಗೆ ಯುವಕರ ಮನಸ್ಸಿನಲ್ಲಿರುವ ಪಪ್ಪು ಎಂಬ ಮನಸ್ಥಿತಿಯೇ ಕಾರಣ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಯುವಕರಿಗೆ ಕಾಂಗ್ರೆಸ್ ಇದೆ ಎಂಬುದೇ ಗೊತ್ತಿಲ್ಲ. ಕಾಂಗ್ರೆಸ್ ಗಾಂಧಿ ಕುಟುಂಬದ ಮೊನೋಪೊಲಿಯಾಗಿದೆ. ರಾಹುಲ್ ಗಾಂಧಿಯೆಂದರೆ ಯುವಕರ ಮನಸ್ಸಿನಲ್ಲಿ ಪಪ್ಪು ಎನ್ನುವ ಮನಸ್ಥಿತಿ ಇನ್ನೂ ಇದೆ. ಈ ಕಾರಣಕ್ಕೆ ಕಾಂಗ್ರೆಸ್ ಸೋಲನ್ನು ಕಂಡಿದೆ ಎಂದರು.
ಇನ್ನು ಜೆಡಿಎಸ್ ಉಪ ಚುನಾವಣೆಯಲ್ಲಿ ಸೋಲಲು ಕಾಂಗ್ರೆಸ್ ಜೊತೆ ಮಾಡಿಕೊಂಡಿದ್ದ ಮೈತ್ರಿಯೇ ಕಾರಣ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಈ ಹಿಂದೆ ಸರ್ಕಾರ ಮಾಡಿದ್ದು ಈ ಚುನಾವಣೆ ಮೇಲೂ ಪರಿಣಾಮ ಬೀರಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಸಹ ಮೈತ್ರಿಯಿಂದಲೇ ಜೆಡಿಎಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿತ್ತು ಎಂದು ಹೇಳಿದರು.