ಕಾರವಾರ (ಉತ್ತರ ಕನ್ನಡ) : ಹಳಿಯಾಳ ಪುರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯೊಂದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಹಿಂದೂಪರ ಸಂಘಟನೆಗಳು ಕರೆಕೊಟ್ಟ ಹಳಿಯಾಳ ಬಂದ್ ವೇಳೆ ಪೊಲೀಸರ ವಿರೋಧ ಲೆಕ್ಕಿಸದೇ ಕಾಮಗಾರಿ ಕೈಗೊಂಡ ಪ್ರದೇಶಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಅಳವಡಿಸಿದ್ದ ಸ್ಲ್ಯಾಬ್ಗಳನ್ನು ಕಿತ್ತೆಸೆದರು. ಮುಂಜಾಗೃತಾ ಕ್ರಮವಾಗಿ ತಾಲ್ಲೂಕಾಡಳಿತ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಸಂಪೂರ್ಣ ವಿವರ: ಹಳಿಯಾಳದ ಪುರಸಭೆ ವ್ಯಾಪ್ತಿಯ ಮರಡಿ ಗುಡ್ಡದ ಬಳಿ ಇರುವ ಮಸೀದಿಯೆದುರು ಬನ್ನಿ ಮಂಟಪವಿದೆ. ಇಲ್ಲಿ ಪುರಸಭೆಯಿಂದ ಹಾಸು ಹುಲ್ಲು ಹಾಗೂ ಇಂಟರ್ ಲಾಕ್ಗಳನ್ನು ಅಳವಡಿಸಲಾಗಿತ್ತು. ಈ ಅಭಿವೃದ್ಧಿ ಕಾಮಗಾರಿಗಳನ್ನು ಪುರಸಭೆ ಒಂದು ಕೋಮಿಗೆ ಅನುಕೂಲವಾಗುವಂತೆ ಮಾಡುತ್ತಿದೆ. ಹಿಂದೂಗಳ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಹಿಂದೂಪರ ಕಾರ್ಯಕರ್ತರು ಆರೋಪಿಸಿ, ಕೆಲಸ ಸ್ಥಗಿತಗೊಳಿಸುವಂತೆ 15 ದಿನಗಳ ಹಿಂದೆ ಮನವಿ ಮೂಲಕ ಆಗ್ರಹಿಸಿದ್ದರು. ಇದಕ್ಕೆ ಪುರಸಭೆ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು.
ಇಷ್ಟಾದರೂ ಅಭಿವೃದ್ಧಿ ಕಾಮಗಾರಿ ನಡೆಸದ ಹಿನ್ನೆಲೆಯಲ್ಲಿ ಗ್ರಾಮದೇವಿ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬಂದ್ಗೆ ಕರೆ ನೀಡಲಾಗಿತ್ತು. ಅದರಂತೆ, ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ ನೇತೃತ್ವದಲ್ಲಿ ಇಂದು ಮುಂಜಾನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ನೂರಾರು ಮಂದಿ ಹಳಿಯಾಳದ ಈದ್ಗಾ ಮೈದಾನದಿಂದ ಪ್ರತಿಭಟನಾ ರ್‍ಯಾಲಿ ಮೂಲಕ ದೇವಸ್ಥಾನ ಜಾಗಕ್ಕೆ ತೆರಳಿದರು. ಅಲ್ಲಿದ್ದ ಪೊಲೀಸ್ ಬಂದೋಬಸ್ತ್ ಮೀರಿ ಪುರಸಭೆಯಿಂದ ನಿರ್ಮಾಣವಾಗುತಿದ್ದ ನೆಲಹಾಸಿನ ಸಿಮೆಂಟ್ ಬ್ಲಾಕ್ಗಳನ್ನು ಕಿತ್ತುಹಾಕಿ ಈದ್ಗಾ ಮೈದಾನದ ಎದುರು ಹಿಂದೂ ಕಾರ್ಯಕರ್ತರು ಭಗವಾಧ್ವಜ ಹಾರಿಸಿದರು.
ಗ್ರಾಮದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಂಗೇಶ ದೇಶಪಾಂಡೆ ಮಾತನಾಡಿ, "ಗ್ರಾಮದೇವಿ ವಾರ್ಷಿಕ ಪೂಜೆ ವೇಳೆ ಇಲ್ಲಿ ಗಿಡ ನೆಟ್ಟು ಪೂಜಾ ವಿಧಿವಿಧಾನ ನಡೆಸಲಾಗುತ್ತದೆ. ಅಲ್ಲದೇ ಇದು ನಮ್ಮ ಪ್ರಮುಖ ಧಾರ್ಮಿಕ ಆಚರಣೆಯ ಸ್ಥಳ. ಈ ಸ್ಥಳದಲ್ಲಿ ಸಿಮೆಂಟ್ ಬ್ಲಾಕ್ ಅಳವಡಿಸದಂತೆ ಹಲವು ಬಾರಿ ಪುರಸಭೆಗೆ ಮನವಿ ಮಾಡಿದ್ದರೂ ಕೇಳದೆ ಅಳವಡಿಸಿದ್ದರು. ಹೀಗಾಗಿ ಬಂದ್ ಕರೆ ಕೊಡಲಾಗಿತ್ತು. ಇದೀಗ ಎಲ್ಲರೂ ಸೇರೆ ಸೀಮೆಂಟ್ ಬ್ಲಾಕ್ಗಳನ್ನು ತೆರವು ಮಾಡಿದ್ದೇವೆ" ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿ, "ಹಳಿಯಾಳದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಸ್ಥಳೀಯರು ಕಾಮಗಾರಿ ಪ್ರದೇಶಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಉದ್ರಿಕ್ತರನ್ನು ನಿಯಂತ್ರಿಸಲು ಮುಂದಾಗಿದ್ದರಾದರೂ ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಎರಡು ಡಿಎಆರ್ ತುಕಡಿ ನೇಮಕ ಮಾಡಲಾಗಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 150ಕ್ಕೂ ಅಧಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಪರಿಸ್ಥಿತಿ ಶಾಂತವಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾಲ್ಲೂಕಾಡಳಿತ ಮರಡಿಗುಡ್ಡ ಸಮೀಪ ಒಂದು ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಿದೆ. ಫೆಬ್ರವರಿ 17 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕ್ಯಾಂಟರ್ಗೆ ಬೈಕ್ ಡಿಕ್ಕಿ: ಯುವಕ, ಯುವತಿ ಸಾವು